ಸಾರಾಂಶ
ರಂಗಭೂಮಿ ಸಾವಯವ ಕಲೆಯಾಗಿದ್ದು, ಇಂದಿನ ಬದುಕಿಗೆ ಅತ್ಯಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಂಗಭೂಮಿ ಸಾವಯವ ಕಲೆಯಾಗಿದ್ದು, ಇಂದಿನ ಬದುಕಿಗೆ ಅತ್ಯಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದ್ದಾರೆ.ಶಿವಮೊಗ್ಗ ರಂಗಾಯಣ ಆಯೋಜಿಸಿದ್ದ ಶಿಕ್ಷಣದಲ್ಲಿ ರಂಗಕಲೆ ಎಂಬ ವಿಷಯ ಕುರಿತ ಮೂರು ದಿನಗಳ ಕಮ್ಮಟ ಉದ್ಘಾಟಿಸಿ ಮಾತನಾಡಿ, ರಂಗಕಲೆ ಆತ್ಮತೃಪ್ತಿ ನೀಡುವ ನೆಮ್ಮದಿ- ಸಮಾಧಾನ ನೀಡುವ ಕಲೆಯಾಗಿದೆ. ಇಂಥ ಕಲಾಸಕ್ತಿ ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.ವಿಧಾನ ಪರಿಷತ್ ಸದಸ್ಯ ಬಲ್ಕಿಷ್ ಬಾನು, ವಿದ್ಯಾರ್ಥಿ ದೆಸೆಯಲ್ಲೇ ಪಠ್ಯೇತರ ಚಟುವಟಿಕೆಗಳಿಂದ ಹೆಚ್ಚಿನ ವಿಷಯ ತಿಳಿದುಕೊಳ್ಳುವ ಅಭ್ಯಾಸ ಅತ್ಯತ್ತಮ ಎಂದರು.ಇತ್ತೀಚಿನ ದಿನಗಳಲ್ಲಿ ಕಲೆ ಬಗ್ಗೆ ಯುವ ಜನತೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಂಗಾಯಣದಂತ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದರು.ಆಶಯ ಭಾಷಣ ಮಾಡಿದ ಶಿವಮೊಗ್ಗ ಡಯಟ್ ನ ಹಿರಿಯ ಉಪನ್ಯಾಸಕ ಡಾ. ಹರಿಪ್ರಸಾದ್ ಜಿವಿ, ಅನೇಕ ಸಲ ಶಿಕ್ಷಣದಲ್ಲಿ ರಂಗಕಲೆಯನ್ನು ಅಥವಾ ರಂಗ ಪ್ರದರ್ಶನವನ್ನೋ ಸಹ ಪಠ್ಯವೆಂದೋ ಅಥವಾ ಇನ್ನೂ ಕೆಲವರು ಪಠ್ಯೇತರವೆಂದೋ ತಪ್ಪಾಗಿ ಗುರುತಿಸುವ ರೂಢಿಯಿದೆ ಎಂದು ಹೇಳಿದರು.ರಂಗಕಲೆಯು ಪಠ್ಯ ಚಟುವಟಿಕೆಯೇ ಆಗಿದೆ. ಯಾವ ತರಗತಿಯಲ್ಲಿ ವೈಯಕ್ತಿಕ ಅನನ್ಯ ಕೌಶಲ್ಯಗಳನ್ನು ಬೆಳೆಸಲು ಸಾಧ್ಯವಿಲ್ಲವೋ ಅವನ್ನು ರಂಗಕಲೆ ಕಲಿಸುವುದಲ್ಲದೇ ಜೀವಂತವಾಗಿಡುತ್ತದೆ. ಆದ್ದರಿಂದಲೇ ಶಿಕ್ಷಣ ನೀತಿಗಳು ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಪಠ್ಯವೆಂದೇ ಗುರುತಿಸುತ್ತವೆ ಎಂದು ವಿವರಿಸಿದರು.ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಆಡಳಿತಾಧಿಕಾರಿ ಡಾ. ಶೈಲಜಾ, ಕಾಲೇಕು ರಂಗೋತ್ಸವ ಸಂಚಾಲಕ ಮಂಜು ರಂಗಾಯಣ, ಶಿಕ್ಷಣದಲ್ಲಿ ರಂಗಕಲೆ ಕಮ್ಮಟದ ಸಂಚಾಲಕ ಆರ್.ಎಸ್. ಹಾಲಸ್ವಾಮಿ ವೇದಿಕೆಯಲ್ಲಿ ಇದ್ದರು.