ಸಾರಾಂಶ
ವಿಶ್ವ ರಂಗಭೂಮಿ ದಿನ । ರಂಗ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಹಿರಿಯೂರುರಂಗಭೂಮಿಯು ಭಾಷೆ, ಸಂಸ್ಕೃತಿ ಮತ್ತು ಕಲೆ ಬಿಂಬಿಸುವ ಮಾಧ್ಯಮವಾಗಿದ್ದು ಇದರ ಉದ್ದೇಶ ಮನರಂಜನೆ ಆದರೂ ಈ ಮಾಧ್ಯಮ ಗಂಭೀರ ವಿಚಾರಗಳಿಂದ ಪ್ರೇಕ್ಷಕರನ್ನು ಸೆಳೆದು ವಿಚಾರಶೀಲರನ್ನಾಗಿ ಮಾಡುತ್ತಿದೆ ಎಂದು ಸಮಾಜ ವಿಜ್ಞಾನಿ ಹಾಗೂ ಎನ್ಎಸ್ಎಎಸ್ ರಾಜ್ಯ ಘಟಕ ಪ್ರಶಸ್ತಿ ಪುರಸ್ಕೃತ ಡಾ.ಡಿ.ಧರಣೇಂದ್ರಯ್ಯ ಹೇಳಿದರು.
ನಗರದ ಗಿರೀಶ ಬಿಇಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಹಾಗೂ ಗಿರೀಶ ಬಿಇಡಿ ಶಿಕ್ಷಣ ಮಹಾವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ರಂಗ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಚಲನಚಿತ್ರ, ದೂರದರ್ಶನದಂತಹ ದೃಶ್ಯ ಮಾಧ್ಯಮದ ಭರಾಟೆಯಲ್ಲಿಯೂ ಸಹ ರಂಗಭೂಮಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡಿದೆ. ಆಧುನಿಕ ಜಗತ್ತು ಒಡ್ಡುವ ಸಮಸ್ಯೆ, ಸವಾಲುಗಳಿಗೆ ರಂಗಭೂಮಿ ಉತ್ತರ ನೀಡಬೇಕಿದೆ. ರಂಗಭೂಮಿಗೆ ಇಂದು ಉತ್ತಮ ನಟನೆ, ಅಭಿನಯ, ನಾಟಕ ರಚನೆ, ಆಧುನಿಕ ತಂತ್ರಜ್ಞಾನದಿಂದ ಕೂಡಿದ ಥಿಯೇಟರ್‌ಗಳ ನಿರ್ಮಾಣದ ಅಗತ್ಯವಿದೆ. ರಂಗಭೂಮಿ ಮನರಂಜನೆಯ ಜೊತೆಗೆ ಮನುಕುಲಕ್ಕೆ ಬೇಕಾದ ಸಹಬಾಳ್ವೆ, ನೆಮ್ಮದಿ, ಸಾಂತ್ವನ ನೀಡುತ್ತದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು ತಮ್ಮಲ್ಲಿ ನೋವು, ಸಂಕಟ, ವೇದನೆ ಇದ್ದರೂ ಸಹ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಾರೆ. ಆದ ಕಾರಣ ನಾಟಕಗಳು ಇಂದಿಗೂ ಜೀವಂತವಾಗಿದ್ದು ರಂಗಭೂಮಿ ಕ್ರಿಯಾಶೀಲ ಮಾಧ್ಯಮವಾಗಿದೆ. ಜನರಿಗೆ ಭಕ್ತಿ, ಭಾವ, ಭಾಷೆ, ಸಂಸ್ಕೃತಿಯನ್ನು ರಂಗಭೂಮಿ ತಿಳಿಸುತ್ತದೆ. ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯು 1961 ರಲ್ಲಿ ಮೊದಲಿಗೆ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸಿತು.ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಮಾ.27 ರಂದು ವಿಶ್ವದ 90ಕ್ಕೂ ಹೆಚ್ಚು ರಾಷ್ಟ್ರಗಳು ವಿಶ್ವರಂಗಭೂಮಿ ದಿನಾಚರಣೆಯನ್ನು ಮಾಡುತ್ತ ಬಂದಿವೆ ಎಂದರು.ಪ್ರಾಂಶುಪಾಲೆ ಡಾ. ಎಂ.ಎ.ಸುಧಾ ಮಾತನಾಡಿ, ರಂಗಭೂಮಿಯು ಸಾಮಾನ್ಯ ಜನರಲ್ಲಿದ್ದ ಅಂಧಕಾರ, ಮೂಢನಂಬಿಕೆ, ಕಂದಾಚಾರ, ರೂಡಿ ಸಂಪ್ರದಾಯಗಳನ್ನು ಹೋಗಲಾಡಿಸುತ್ತದೆ ಎಂದರು.
ರಂಗಸಾಧಕರಾದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ, ಹಿರಿಯೂರಿನ ಆರ್.ತಿಪ್ಪೇರುದ್ರಣ್ಣ, ವದ್ದಿಕೆರೆ ಬಸವರಾಜ್, ಯರಬಳ್ಳಿಯ ಜೆ.ನಿಜಲಿಂಗಪ್ಪ, ಗೂಡನೂರನಹಳ್ಳಿಯ ಸಿ.ಶ್ರೀನಿವಾಸ, ಸಾಲುಹುಣಸೆ ಆರ್. ಚಿದಾನಂದಪ್ಪ, ನೆರೆನಾಳ್ ಶಿವಲಿಂಗಪ್ಪ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಹಿರಿಯ ಉಪನ್ಯಾಸಕಿ ಡಿ.ವೇದಾ, ಉಪನ್ಯಾಸಕರಾದ ಬಿ.ಸಿ.ವನಿತಾ, ಲೋಕೇಶ್, ಪ್ರಮೋದ್, ಮಂಜು, ವಿಜಯಶ್ರೀ, ಕುಶಾ.ಜಿಎಸ್,ಆಲಿಂ, ಸೈಯದ್ ಯಾಯಿಯ್ಯ, ಸುದೀಪ್, ದಾನನಗೌಡ, ಮಂಗಳ ಇದ್ದರು.