ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ರಂಗಭೂಮಿ ವತಿಯಿಂದ ನಡೆದ 54ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೆಂಗಳೂರಿನ ರಂಗರಥ ಟ್ರಸ್ಟ್‌ನ ಕಲಾವಿದರು ಅಭಿನಯಿಸಿದ ‘ಧರ್ಮನಟಿ’ ನಾಟಕಕ್ಕೆ ಪ್ರಥಮ ಬಹುಮಾನ ಲಭಿಸಿದೆ.ಈ ತಂಡವು 35, 000 ರು. ನಗದು ಹಾಗೂ ಡಾ. ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ. ಎಸ್. ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆ ತನ್ನದಾಗಿಸಿಕೊಂಡಿದೆ.ಬೆಂಗಳೂರಿನ ನಮ್ದೆ ನಟನೆ ತಂಡದ ‘ನಾಯಿ ಕಳೆದಿದೆ’ ನಾಟಕ ದ್ವಿತೀಯ (25,000 ರು. ಮತ್ತು ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆ) ಹಾಗೂ ಉಡುಪಿಯ ಹಾರಾಡಿ ಭೂಮಿಕಾ ತಂಡದ ‘ಬರ್ಬರೀಕ’ ನಾಟಕವು ತೃತೀಯ (15,000 ರು. ಮತ್ತು ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆ) ಬಹುಮಾನಗಳನ್ನು ಗೆದ್ದುಕೊಂಡಿವೆ.ಬೆಂಗಳೂರು ರಂಗರಥ ಟ್ರಸ್ಟ್‌ನ ಅಸೀಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಶ್ರೇಷ್ಠ ನಿರ್ದೇಶನ ಪ್ರಥಮ, ಶ್ವೇತಾ ಶ್ರೀನಿವಾಸ್ ಶ್ರೇಷ್ಠ ನಟಿ ಪ್ರಥಮ, ಶ್ರೀಯಾ ಅಗಮ್ಯ ಶ್ರೇಷ್ಠ ನಟಿ ತೃತೀಯ, ಅನುಷ್ ಕೃಷ್ಣ ಶ್ರೇಷ್ಠ ನಟ ತೃತೀಯ, ಭಿನ್ನಷಡ್ಜ ಶ್ರೇಷ್ಠ ಸಂಗೀತ ಪ್ರಥಮ, ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ ಪ್ರಥಮ, ಶ್ರೇಷ್ಠ ಪ್ರಸಾಧನ ಪ್ರಥಮ, ಶ್ರೇಷ್ಠ ರಂಗ ಬೆಳಕು ದ್ವಿತೀಯ ಬಹುಮಾನಗಳನ್ನೂ ಗೆದ್ದುಕೊಂಡಿದೆ.ಬೆಂಗಳೂರಿನ ನಮ್ದೆ ನಟನೆ ತಂಡದ ರಾಜೇಂದ್ರ ಕಾರಂತ ಶ್ರೇಷ್ಠ ನಟನೆ ದ್ವಿತೀಯ, ರಾಜೇಂದ್ರ ಕಾರಂತ ಶ್ರೇಷ್ಠ ನಟ ಪ್ರಥಮ, ಆಪೇಕ್ಷಾ ಘಳಿಗಿ ಶ್ರೇಷ್ಠ ನಟಿ ದ್ವಿತೀಯ, ಪ್ರಣವ ಕಾರಂತ ಶ್ರೇಷ್ಠ ಸಂಗೀತ ದ್ವಿತೀಯ, ಡಾ.ಮಮತಾ ರಾವ್ ಶ್ರೇಷ್ಠ ಹಾಸ್ಯ ನಟನೆ ಬಹುಮಾನಗಳು ಲಭಿಸಿವೆ.ತೀರ್ಪುಗಾರರಾಗಿ ಪುರುಷೋತ್ತಮ ತಳವಾಟ್, ಕೃಷ್ಣಕುಮಾರ್ ನಾರ್ಣಕಜೆ, ಪ್ರಭಾಕರ್ ಜಿ. ಪಿ., ಸುಧಾ ಮಣೂರು, ಕೆ. ಲಕ್ಷೀನಾರಾಯಣ ಭಟ್ ಸಹಕರಿಸಿದ್ದರು.ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಪ್ರಥಮ ಪ್ರಶಸ್ತಿ ಪುರಸ್ಕೃತ ‘ಧರ್ಮನಟಿ’ ನಾಟಕದ ಮರು ಪ್ರದರ್ಶನವು ಫೆ. 1 ರಂದು ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಫೆ. 2ರಂದು ನಾಡಿನ ಶ್ರೇಷ್ಠ ಸಾಧಕರಿಗೆ ನೀಡುವ ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ರಂಗಭೂಮಿ ಉಡುಪಿ ತಿಳಿಸಿದೆ.