ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಹೊಸ ಅಲೆ ರಂಗಭೂಮಿಯ ವೃತ್ತಿನಿರತ ರಂಗಕಲಾವಿದರಿಂದ ಶಾಲೆ ಶಿಕ್ಷಣದಲ್ಲಿ ರಂಗಭೂಮಿ ಪ್ರಯೋಗ ಮಾಡಿದ್ದು. ಕರಕುಚ್ಚಿ ಶಾಲೆಯ ಈ ಹೊಸ ಪ್ರಯತ್ನವಿದ್ಯಾರ್ಥಿಗಳಿಗೆ ಹೊಸ ರೀತಿ ಕಲಿಕೆಯ ಅನುಭವ ನೀಡಿದೆ ಎಂದು ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ಹೇಳಿದರು.ಕರಕುಚ್ಚಿ ಸ.ಹಿ.ಮಾ. ಪ್ರಾಥಮಿಕ ಶಾಲೆ ನಮ್ಮ ಶಾಲೆ ನಮ್ಮ ಟ್ರಸ್ಟ್ ನಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕ್ರಾಂತಿಯ ರಂಗ ಶಿಬಿರ, ರಂಗತಂತ್ರಗಳೊಂದಿಗೆ ಪಠ್ಯ ಬೋಧನಾ ಪ್ರಯೋಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಮೊಗ್ಗ ಜಿಲ್ಲೆ ಸೊರಬದ ಚಂದ್ರಗುತ್ತಿ ಗ್ರಾಮದ ಹೆಸರಾಂತ ರಂಗಶಿಕ್ಷಕ ಬಿ.ಕೆ ಮಹಾಬಲೇಶ್ವರ್ ಶಾಲೆಯಲ್ಲಿ ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಇವರ ರಂಗಭೂಮಿ ಅನುಭವ ಮಕ್ಕಳ ಕಲಿಕೆಗೆ ವರದಾನವಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಭೂಗೋಳ, ಕನ್ನಡ ವ್ಯಾಕರಣ ಎಂದು ಪಾಠ ಓದುವ ಮಕ್ಕಳು. ಇಲ್ಲಿ ಕೋಲಾಟ ಕಂಸಾಳೆ, ರಂಗಾಟಗಳು, ನಗೆ ನಾಟಕ, ಸಂಗೀತ, ಮೂಕಾಭಿನಯ, ಪ್ರಸಾಧನ, ಮತ್ತು ಜನಪದ ಅಂತಾ ಫುಲ್ ದಿಲ್ಖುಷ್ ಆಗಿದ್ದಾರೆ ಎಂದು ಹೇಳಿದ್ದಾರೆ.
1 ರಿಂದ 7 ನೇ ತರಗತಿ ಮಕ್ಕಳು, ಕಳೆದ ಒಂದು ತಿಂಗಳಿನಿಂದ ತರಗತಿವಾರು ಒಂದೊಂದು ಗಂಟೆ, ಪಾಠಿಚೀಲ ಬದಿಗಿಟ್ಟು, ಉತ್ಸಾಹದಿಂದ ರಂಗ ಚಟುವಟಿಕೆ ಗಳೊಂದಿಗೆ ಪಠ್ಯ ಮತ್ತು ಪಠ್ಯೇತರ ಶಿಕ್ಷಣ ಶಿಬಿರದಲ್ಲಿ ಪಾಲ್ಗೊಂಡ ಈ ದೃಶ್ಯಗಳು ಇಡೀ ಶಾಲೆಯನ್ನೇ ನಾಟಕದ ರಂಗ ಭೂಮಿ ವೇದಿಕೆಯಂತೆ ಸಜ್ಜುಗೊಂಡಂತೆ ಆಗಿದ್ದು ಎಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.ಶಾಲೆ ಅಂತರಂಗ ಮತ್ತು ಬಹಿರಂಗ ಸೌಂದರ್ಯ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳಿಗೆ ಪಠ್ಯ-ಪಠ್ಯೇತರ ಚಟುವಟಿಕೆಗಳ ಮುಖಾಂತರ ಪರಿಣಾಮಕಾರಿ ವಿದ್ಯಾರ್ಜನೆ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಹಳೆ ವಿದ್ಯಾರ್ಥಿಗಳು ಶಾಲೆ ಮೇಲಿನ ಪ್ರೀತಿ ಮತ್ತು ಕಾಳಜಿಯ ಸಂಘಟನೆ. ಶಾಲೆಯಲ್ಲಿನ ಎಲ್ಲ ತರಗತಿಗಳ ಮಕ್ಕಳಿಗೂ ಕ್ರಮಬದ್ಧವಾಗಿ ವಿವಿಧ ರೀತಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಪಠ್ಯ-ಬೋಧನೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲಾಗಿದೆ. ಶಿಬಿರದಲ್ಲಿ ಪ್ರಮುಖವಾಗಿ ದೇಶಭಕ್ತಿಗೀತೆಗಳು, ಕೋಲಾಟದ ಪದಗಳೊಂದಿಗೆ ನೃತ್ಯ, ಕಂಸಾಳೆ ನೃತ್ಯ, ರಂಗಾಟಗಳು, ಪಠ್ಯಾಧಾರಿತ ನಾಟಕಗಳು, ನಗೆ ನಾಟಕಗಳು, ಧ್ಯಾನದ ತರಗತಿಗಳು, ಮೂಕಾಭಿನಯ, ಪ್ರಸಾಧನದ ತರಗತಿಗಳು ಮತ್ತು ಶಿಕ್ಷಣದಲ್ಲಿ ರಂಗಭೂಮಿ ಬಗ್ಗೆ ತರಗತಿ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಈ ಶಿಬಿರದಿಂದ ಪಠ್ಯ ವಿಷಯಗಳಲ್ಲಿ ಹೆಚ್ಚು ಅನುಕೂಲವಾಗಿದೆ ಎಂದರು.
ದತ್ತು ಸ್ವೀಕಾರ: ಕರಕುಚ್ಚಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕಳೆದ 3ವರ್ಷಗಳಿಂದ ಈ ಶಾಲೆಯನ್ನು ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ (ರಿ) ಕರಕುಚ್ಚಿ ಎಂಬ ಹಳೆ ವಿದ್ಯಾರ್ಥಿಗಳ ಸಂಸ್ಥೆ ದತ್ತು ಸ್ವೀಕರಿಸಿದೆ. ಶಾಲೆ ಸರ್ವತೋಮುಖ ಬೆಳವಣಿಗೆಗಾಗಿ ಅನೇಕ ಕಾರ್ಯಕ್ರಮ, ಯೋಜನೆಗಳನ್ನು ಟ್ರಸ್ಟ್ ಆಯೋಜಿಸುತ್ತಾ ಬಂದಿದೆ, ಶಾಲೆ ಶಿಕ್ಷಣದಲ್ಲಿ ರಂಗಭೂಮಿ ಪ್ರಯೋಗ ಮಾಡಿದ್ದು ಕರಕುಚ್ಚಿ ಶಾಲೆ ಒಂದು ಅರ್ಥಪೂರ್ಣ ನೂತನ ಪ್ರಯತ್ನವಾಗಿದೆ ಎಂದು ತಿಳಿಸಿದರು.ಒಂದು ತಿಂಗಳ ಕಾಲ ಕರಕುಟ್ಟಿ ಗ್ರಾಮದಲ್ಲಿದ್ದು, ಮಕ್ಕಳಿಗೆ ವಿವಿಧ ರಂಗಚಟುವಟಿಕೆಗಳಲ್ಲಿ ತರಬೇತಿ ನೀಡಿದ ರಂಗ ಶಿಕ್ಷಕ ಬಿ.ಕೆ. ಮಹಾಬಲೇಶ್ವರ್ ಮತ್ತು ಈ ವಿಶೇಷ ಶಿಬಿರಕ್ಕಾಗಿ ಸಹಕಾರ ನೀಡಿದ ಹಳೆ ವಿದ್ಯಾರ್ಥಿಗಳಿಗೆ, ಶಾಲಾ ಸಿಬ್ಬಂದಿ ವೃಂದ, ಎಸ್.ಡಿ.ಎಂ.ಸಿ.ಸಮಿತಿ ಪದಾಧಿಕಾರಿಗಳಿಗೆ ಟ್ರಸ್ಟ್ ಅಧ್ಯಕ್ಷರು ಧನ್ಯವಾದ ತಿಳಿಸಿದ್ದಾರೆ.
ಶಾಲಾ ಮಕ್ಕಳಿಗಾಗಿ ಸತತ ಒಂದು ತಿಂಗಳ ಕಾಲ ಉಚಿತ ರಂಗಶಿಬಿರ ಸಂಘಟಿಸಿದ್ದಕ್ಕಾಗಿ ಶಾಲಾ ಶಿಕ್ಷಕರು, ಗ್ರಾಮದ ವಿದ್ಯಾರ್ಥಿಗಳ ಪೋಷಕರು ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ಗೆ ಧನ್ಯವಾದ ತಿಳಿಸಿದ್ದಾರೆ.18ಕೆಟಿಆರ್.ಕೆ.04ಃತರೀಕೆರೆ ಸಮೀಪದ ಕರಕುಚ್ಚಿ ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆಯ ನಮ್ಮ ಶಾಲೆ ನಮ್ಮಟ್ರಸ್ಟ್ದ ನಿಂದ ಶಾಲೆಯಲ್ಲಿ ಸಾಂಸ್ಕೃತಿಕ ಕ್ರಾಂತಿಯ ರಂಗಶಿಬಿರ, ರಂಗತಂತ್ರಗಳೊಂದಿಗೆ ಪಠ್ಯ ಬೋಧನಾ ಪ್ರಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.