ಸಾರಾಂಶ
ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಶ್ರೀ ಪೊಂಪಯ್ಯತಾತ ನವರ 33ನೇ ಪುಣ್ಯಸ್ಮರಣೆ ಅಂಗವಾಗಿ ಗೆಣಿಕೆಹಾಳ್‌ನ ಎಲಿವಾಳ ಸಿದ್ದಯ್ಯಸ್ವಾಮಿ ಕಲಾಬಳಗದಿಂದ ಕಂದಗಲ್ ಹನುಮಂತರಾಯರ ವಿರಚಿತ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ಜರುಗಿತು.
ಬಂಡ್ರಾಳು ಗ್ರಾಮದಲ್ಲಿ ಪೊಂಪಯ್ಯತಾತನವರ ಪುಣ್ಯಸ್ಮರಣೆ; ರಕ್ತರಾತ್ರಿ ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ ಸಿರುಗುಪ್ಪತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಶ್ರೀ ಪೊಂಪಯ್ಯತಾತ ನವರ 33ನೇ ಪುಣ್ಯಸ್ಮರಣೆ ಅಂಗವಾಗಿ ಗೆಣಿಕೆಹಾಳ್‌ನ ಎಲಿವಾಳ ಸಿದ್ದಯ್ಯಸ್ವಾಮಿ ಕಲಾಬಳಗದಿಂದ ಕಂದಗಲ್ ಹನುಮಂತರಾಯರ ವಿರಚಿತ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ಜರುಗಿತು.
ನಾಟಕ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸಿರುಗುಪ್ಪದ ಶ್ರೀಬಸವ ಭೂಷಣ ಸ್ವಾಮಿ ಮಾತನಾಡಿ, ರಂಗಭೂಮಿಗೆ ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ಶಕ್ತಿಯಿದೆ. ನಾಟಕಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿಯೇ ರಂಗಭೂಮಿಯನ್ನು ಪ್ರಭಾವಿ ಮಾಧ್ಯಮ ಎಂದೇ ಪರಿಗಣಿಸಲಾಗಿದೆ ಎಂದು ತಿಳಿಸಿದರು.ಯಾವುದೇ ರಂಗಭೂಮಿ ಕಲಾ ಪ್ರಕಾರಗಳು ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಮನರಂಜನೆಯ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ರಾಮಾಯಣ ಹಾಗೂ ಮಹಾಭಾರತದ ಕಥಾ ಹಂದರದ ನಾಟಕಗಳು ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಕೆ. ಫೌಂಡೇಶನ್‌ನ ಅಧ್ಯಕ್ಷ ಜಿ.ಕೆ. ವಿಜಯಕುಮಾರಸ್ವಾಮಿ ಮಾತನಾಡಿ, ಗ್ರಾಮೀಣರಲ್ಲಿ ಇಂದಿಗೂ ಸಾಂಸ್ಕೃತಿಕ ಆಸಕ್ತಿಗಳು ಜೀವಂತವಾಗಿವೆ. ನಾಟಕ ಹಾಗೂ ಬಯಲಾಟಗಳನ್ನು ಹಳ್ಳಿ ಜನರು ಇಡೀ ರಾತ್ರಿ ವೀಕ್ಷಿಸಿ ಆನಂದಿಸುತ್ತಾರೆ. ಸಂಘ-ಸಂಸ್ಥೆಗಳು ರಂಗಭೂಮಿ ಚಟುವಟಿಕೆಗಳನ್ನು ನಗರ ಪ್ರದೇಶಕ್ಕೆ ಸೀಮಿತಗೊಳಿಸದೆ ಹಳ್ಳಿಗಳತ್ತ ಬರಬೇಕು. ಗ್ರಾಮೀಣರಲ್ಲಿನ ರಂಗಾಸಕ್ತಿಯನ್ನು ಪ್ರೇರೇಪಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಬಂಡ್ರಾಳ್ ಮೃತ್ಯುಂಜಯಸ್ವಾಮಿ ವಹಿಸಿದ್ದರು.
ಎಂ.ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಬಂಡ್ರಾಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ನಾಟಕ ವೀಕ್ಷಿಸಿ ಆನಂದಿಸಿದರು. ಶ್ರೀ ಪೊಂಪಯ್ಯತಾತ ಸೇವಾ ಟ್ರಸ್ಟ್ ಕಾರ್ಯಕ್ರಮ ಸಂಘಟಿಸಿತ್ತು.