ನಿರಂತರ ತಂಡವು ನಮ್ಮ ಸಂವಿಧಾನದ ಮೂಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಸೋದರತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಅನೇಕ ವರ್ಷಗಳಿಂದ ಬದ್ಧವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ಕನ್ನಡಪ್ರಭ ವಾರ್ತೆ ಮೈಸೂರುರಂಗಭೂಮಿ ಕೇವಲ ಮನರಂಜನೆಯಲ್ಲ; ಅದು ಸಮಾಜದ ಕನ್ನಡಿ ಹಾಗೂ ನಮ್ಮ ಆತ್ಮಸಾಕ್ಷಿ. ಈ ರಂಗೋತ್ಸವ ಒಂದು ಸಾಕ್ಷಿ ಪ್ರಜ್ಞೆಯಾಗಿದೆ ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಹೇಳಿದರು.ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಿಂರತರ ತಂಡವು ಆಯೋಜಿಸಿರುವ ನಿರಂತರ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.ನಿರಂತರ ತಂಡವು ನಮ್ಮ ಸಂವಿಧಾನದ ಮೂಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಸೋದರತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಅನೇಕ ವರ್ಷಗಳಿಂದ ಬದ್ಧವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂವಿಧಾನ ಕೇವಲ ಕಾನೂನು ದಾಖಲೆ ಅಲ್ಲ, ಅದು ಜೀವನದ ತತ್ವ ಎಂದು ಅವರು ಹೇಳಿದರು.ಸಮಾಜದಲ್ಲಿ ವ್ಯಕ್ತಿಯ ಗೌರವ ಮತ್ತು ಸಾಮಾಜಿಕ ನ್ಯಾಯದ ಕಾಳಜಿಯನ್ನು ನಿರಂತರವಾಗಿ ಅಭಿವ್ಯಕ್ತಿಸುತ್ತಿರುವ ನಿರಂತರ ತಂಡದ ಕಾರ್ಯ ಶ್ಲಾಘನೀಯ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಕಲೆ, ಚಿಂತನೆ ಮತ್ತು ಬದುಕು – ಈ ಮೂರನ್ನು ಏಕತ್ವಗೊಳಿಸುವ ಬದ್ಧತೆ ಅತ್ಯಗತ್ಯವಾಗಿದೆ ಎಂದರು. ಇಂದಿನ ಜಾಗತಿಕ ಪರಿಸ್ಥಿತಿ ಹಿಂಸೆ, ಕ್ರೌರ್ಯ ಮತ್ತು ಯುದ್ಧಗಳಿಂದ ತುಂಬಿರುವ ಸಂದರ್ಭದಲ್ಲಿ, ಸಂವೇದನಶೀಲತೆ ಮತ್ತು ಸಾಂಸ್ಕೃತಿಕ ಮನೋಭಾವವನ್ನು ಬೆಳೆಸುವುದು ಸಾಹಿತಿಗಳು, ಕಲಾವಿದರು ಮತ್ತು ಕ್ರೀಡಾಪಟುಗಳ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.ಕಲೆ ಎಂದಿಗೂ ಮನುಷ್ಯರ ನಡುವೆ ಭಿನ್ನತೆಗಳನ್ನು ಎಣಿಸಬಾರದು; ಜಾತಿ ವೈಷಮ್ಯವನ್ನು ಬೆಳೆಸದೆ, ಜಾತಿ ವಿನಾಶಕ್ಕೆ ಕಾರಣವಾಗಬೇಕು. ಇಂದಿನ ರಂಗಭೂಮಿ ಅದನ್ನೇ ಸಾಧಿಸುತ್ತಿದೆ ಎಂದರು.ಇಂತಹ ದುರ್ಬಲ ಮತ್ತು ಸಂಕಟಕರ ಸಮಯದಲ್ಲಿ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸುವುದು, ಸಂವೇದನಶೀಲ ಹಾಗೂ ಮಾನವೀಯ ಹೃದಯವನ್ನು ರೂಪಿಸುವುದು ಸಾಹಿತಿಗಳು, ಕಲಾವಿದರು ಮತ್ತು ಕ್ರೀಡಾಪಟುಗಳ ಮಹತ್ತರ ಕರ್ತವ್ಯ. ಇದು ಕೇವಲ ಕೆಲವರಲ್ಲ, ಎಲ್ಲರಿಗೂ ಸೇರಿದ ಸಾಮಾಜಿಕ ಹೊಣೆಗಾರಿಕೆ ಎಂದು ಅವರು ಹೇಳಿದರು.ಪ್ರಸ್ತಾವಿಕವಾಗಿ ಪ್ರಸಾದ್ ಕುಂದೂರು ಮಾತನಾಡಿ, ಇಂದಿನ ಸಮಾಜದ ಸವಾಲುಗಳು ಹಾಗೂ ನಿರಂತರ ರಂಗೋತ್ಸವದ ಆಶಯ ಮತ್ತು ಉದ್ದೇಶಗಳನ್ನು ವಿವರಿಸಿದರು.ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಕಾಳಚನ್ನೆಗೌಡ, ಪ್ರೊ. ಚಿದಾನಂದ ಗೌಡ, , ನಿರಂತರದ ಶ್ರೀನಿವಾಸ್ ಪಾಲಹಳ್ಳಿ, ಹರಿಪ್ರಸಾದ್, ಪದ್ಮಶ್ರೀ ರಾಮ್ ಸೇರಿದಂತೆ ಹಲವರು ಇದ್ದರು.ಉದ್ಘಾಟನಾ ಸಮಾರಂಭದ ನಂತರ ಬೆಂಗಳೂರಿನ ಕಲಾ ಮಾಧ್ಯಮ ತಂಡದ ಅಭಿನಯದಲ್ಲಿ, ಗಿರಿರಾಜ್ ಅವರ ನಿರ್ದೇಶನದ ನನ್ನ ತೇಜಸ್ವಿ ನಾಟಕವು ಪ್ರದರ್ಶನಗೊಂಡಿತು.