ಸಾರಾಂಶ
ಹಿರಿಯೂರು: ಉತ್ತಮ ಸಮಾಜ ನಿರ್ಮಾಣಕ್ಕೆ ರಂಗಭೂಮಿ ಒಂದು ಶಕ್ತಿಶಾಲಿ ಮಾಧ್ಯಮವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ನುಂಕಪ್ಪ ಹೇಳಿದರು,
ನಗರದ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪುವೀ ರಂಗಮಂದಿರ ಲೋಕಾರ್ಪಣೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಂಗ ಚಟುವಟಿಕೆಗಳು ವ್ಯಕ್ತಿ ಮತ್ತು ಸಮಾಜದ ವಿಕಸನಕ್ಕೆ ಪರಿಣಾಮಕಾರಿಯಾದ ಕೊಡುಗೆ ನೀಡುತ್ತವೆ. ಪ್ರಸ್ತುತ ಸಂದರ್ಭದಲ್ಲಿ ರಂಗ ಚಟುವಟಿಕೆಗಳ ಮೂಲಕ ಮೌಲ್ಯಯುತ ಸಂದೇಶಗಳನ್ನು ಯುವ ಸಮೂಹಕ್ಕೆ ತಲುಪಿಸಬೇಕಾದ ಅನಿವಾರ್ಯತೆ ಇದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಹಾವಳಿಯಿಂದ ಗ್ರಾಮೀಣ ಪ್ರದೇಶದಲ್ಲೂ ಸಾಂಸ್ಕೃತಿಕ ಪಲ್ಲಟವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇಂತಹ ಹೊತ್ತಿನಲ್ಲಿ ಶೈಕ್ಷಣಿಕ ಸೇವೆಯ ಜೊತೆಗೆ ರಂಗಕಲೆಯಂತಹ ಚಟುವಟಿಕೆಗಳಿಗೆ ಒತ್ತುಕೊಟ್ಟು ಡಾ.ವಿ.ಬಸವರಾಜರವರು ಸುಸಜ್ಜಿತವಾದ ರಂಗ ಮಂದಿರ ನಿರ್ಮಾಣ ಮಾಡಿಸಿರುವುದು ಶ್ಲಾಘನೀಯ ಸಂಗತಿ ಎಂದರು.
ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ವಿ.ಬಸವರಾಜ್ ಮಾತನಾಡಿ, ರಂಗಭೂಮಿ ಎಂಬ ಪರಿಕಲ್ಪನೆಗೆ ನೂರಾರು ವರ್ಷಗಳ ಇತಿಹಾಸವಿದೆ. ನಾಟಕ ಗ್ರೀಕರು ಬಳುವಳಿಯಾಗಿ ನೀಡಿದಂತಹ ವಿಶೇಷ ಕಲೆಯಾಗಿದೆ. ನಾಟಕ ಬರಿ ಕಲೆಯಲ್ಲ ಅದೊಂದು ಬದುಕು. ಇಂದಿನ ಪ್ರಖ್ಯಾತ ನಟರು ಮೂಲ ರಂಗಭೂಮಿಯ ಕಲಾವಿದರು ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.ಪರಿಪಕ್ವವಾದಂತಹ ಅಭಿನಯವನ್ನು ರಂಗಭೂಮಿ ಕಲೆಯಿಂದ ಮಾತ್ರ ಕಲಿಯಲು ಸಾಧ್ಯ. ಯುವ ಜನತೆಯನ್ನು, ವಿದ್ಯಾರ್ಥಿಗಳನ್ನು ರಂಗ ಕಲೆಯತ್ತಾ ಆಕರ್ಷಿತರನ್ನಾಗಿಸಲು ಸರ್ಕಾರ ಹಾಗೂ ರಂಗಕರ್ಮಿಗಳು ವಿಭಿನ್ನ ಪ್ರಯತ್ನಗಳನ್ನು ಮಾಡಬೇಕಾದ ಅವಶ್ಯಕತೆ ಇದೆ. ನಾವು ಆ ನಿಟ್ಟಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿದ್ದು, ಪ್ರತಿ ಮಾಸ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ರಂಗ ಕಲೆಯ ಜೊತೆಗೆ ಜಾನಪದ ಚಟುವಟಿಕೆಗಳಿಗೂ ಹೆಚ್ಚು ಹೊತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜ್ಞಾನ ಭಾರತಿ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಎನ್.ಧನಂಜಯ, ನಿವೃತ್ತ ಪ್ರಾಚಾರ್ಯ ಹಾಗೂ ಲೇಖಕ ಎಂ.ಜಿ.ರಂಗಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ, ಕಸಾಪ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ರಂಗಕರ್ಮಿ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ರಂಗ ನಿರ್ದೇಶಕ ಪ್ರಕಾಶ್ ಬಾದರದಿನ್ನಿ, ರಂಗಗೀತೆ ಗಾಯಕ ಹರೀಶ್, ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಅವಿನಾಶ್, ಆರ್.ಭೀಮಪ್ಪ, ಡಾ.ವೇದಾಂತ್, ಡಾ.ಸಂಜೀವ್ ಕುಮಾರ್ ಫೋತೆ, ಡಾ.ಕುಮಾರ್, ಹಿರಿಯ ಉಪನ್ಯಾಸಕ ಎಂ.ಬಸವರಾಜ ವ್ಯವಸ್ಥಾಪಕರಾದ ಕೆ.ದೋರೇಶ್, ಗಿರೀಶ್.ಡಿ, ನಾಗೇಶ್, ರವಿಕುಮಾರ್, ಅರುಣ ಕುಮಾರಿ, ನಿಂಗರಾಜು ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ಮೈಸೂರಿನ ನಿರ್ದಿಗಂತ ರಂಗ ತಂಡದಿಂದ ಗಣೇಶ್ ಹೆಗ್ಗೋಡು ಸಾರಥ್ಯದ ವಿಜಯಪುರದ ಶಕೀಲ್ ಅಹಮದ್ ನಿರ್ದೇಶನದ ತಿಂಡಿಗೆ ಬಂದ ತುಂಡೇರಾಯ ಎನ್ನುವ ನಾಟಕ ಪ್ರದರ್ಶನಗೊಂಡಿತು. ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೂಕಿನ ರಂಗಾಸಕ್ತರು ನಾಟಕ ವೀಕ್ಷಿಸಿದರು.