ರಂಗಭೂಮಿಗೆ ಪ್ರೋತ್ಸಾಹ ಅಗತ್ಯ: ಪರಮೇಶ್ವರ್‌

| Published : Sep 23 2025, 01:03 AM IST

ಸಾರಾಂಶ

ನಾಟಕವೇ ಸಂಸ್ಕೃತಿ, ಸಮಾಜದ ಪ್ರತಿಬಿಂಬ. ನಾಟಕಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು ನಾಟಕವೇ ಸಂಸ್ಕೃತಿ, ಸಮಾಜದ ಪ್ರತಿಬಿಂಬ. ನಾಟಕಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.ಸೋಮವಾರ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಿರ್ಮಿಸಿರುವ ಮಾಸ್ಟರ್ ಹಿರಣ್ಣಯ್ಯ ರಂಗ ವೇದಿಕೆಯಲ್ಲಿ ನಡೆದ ರಂಗ ದಸರಾ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗುಬ್ಬಿ ವೀರಣ್ಣ ಕಲಾಮಂದಿರವು ಅನೇಕ ಕಲಾವಿದರಿಗೆ ಜನ್ಮ ನೀಡಿರುವ ಮಂದಿರ. ಮಾಧ್ಯಮಗಳಿಲ್ಲದ ಕಾಲದಲ್ಲಿ ನಾಟಕಗಳು ಸಮಾಜದ ಕನ್ನಡಿ ಆಗಿದ್ದವು. ಚಿತ್ರಮಂದಿರಗಳ ಪ್ರಭಾವದಿಂದ ನಾಟಕ ಮಂದಿರಗಳು ಕುಂಠಿತವಾಗಿದ್ದರೂ, ಕಲೆಯ ಜೀವಂತಿಕೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ಪೀಳಿಗೆ ನಾಟಕ ರಸಸ್ವಾದನೆ ಮಾಡಲು ದಸರಾ ಉತ್ಸವದ ಅಂಗವಾಗಿ ರಂಗಮಂದಿರಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಗುಬ್ಬಿ ವೀರಣ್ಣ ಅವರ ನೇತೃತ್ವದಲ್ಲಿ ಅನೇಕ ಕಲಾಭಿಮಾನಿಗಳು ಹಾಗೂ ಕಲಾವಿದರು ಬೆಳೆದಿದ್ದಾರೆ. ಶ್ರೇಷ್ಠ ನಾಟಕ ರತ್ನಗಳನ್ನು ದೇಶಕ್ಕೆ ಪರಿಚಯಿಸುವಲ್ಲಿ ತುಮಕೂರು ಜಿಲ್ಲೆಯ ಪಾತ್ರ ಹಿರಿದಿದೆ. ಅದಕ್ಕಾಗಿ ದಸರಾ ಉತ್ಸವದ 9 ದಿನಗಳಲ್ಲಿ 15 ನಾಟಕ ಪ್ರದರ್ಶನಗಳ ಮೂಲಕ ರಂಗಭೂಮಿಗೆ ಬಲ ನೀಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಬಿ. ಜಯಚಂದ್ರ,ಎಚ್‌.ವಿ. ವೆಂಕಟೇಶ್, ಪ್ರಭುದೇವ್, ಇತರರಿದ್ದರು. ಈ ಸಂದರ್ಭದಲ್ಲಿ ಡಾ: ಗುಬ್ಬಿ ವೀರಣ್ಣ ಹಾಗೂ ಮಾಸ್ಟರ್ ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೆಗಾ ಇಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯವರು ದಸರಾ ಉತ್ಸವದ ಕಾರ್ಯಕ್ರಮಕ್ಕೆ 50 ಲಕ್ಷ ರೂ.ಗಳನ್ನು ದೇಣಿಗೆ ನೀಡಿದರು.