ಸಾರಾಂಶ
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಅಂಬಲಪಾಡಿ ದೇವಳದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಜಿಎಂ ಕಾಲೇಜು ಉಡುಪಿ ಸಹಕಾರದಲ್ಲಿ ರಂಗಭೂಮಿ ಉಡುಪಿ ಡಾ.ನಿ.ಬೀ.ಅಣ್ಣಾಜಿ ಬಲ್ಲಾಳ್ ಅವರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ನಾಟಕಗಳು ನಮ್ಮ ಜೀವ, ನಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿವೆ. ಸಾಮಾಜಿಕ, ಐತಿಹಾಸಿಕ, ಧಾರ್ಮಿಕ ವಿಷಯಗಳಲ್ಲಿ ರಂಗಭೂಮಿ ಇಂದು ಬೆಳೆದು ಸಮೃದ್ಧವಾಗಿದೆ. ಉತ್ತಮ ಜೀವನ ಸಂದೇಶವನ್ನು ಭಿತ್ತರಿಸುವ ಈ ರಂಗಭೂಮಿ ಆರೋಗ್ಯವಂತ ಸಮಾಜದ ಪ್ರತಿಬಿಂಬವೂ ಹೌದು ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಹೇಳಿದರು.ಅವರು ಭಾನುವಾರ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಅಂಬಲಪಾಡಿ ದೇವಳದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಜಿಎಂ ಕಾಲೇಜು ಉಡುಪಿ ಸಹಕಾರದಲ್ಲಿ ರಂಗಭೂಮಿ ಉಡುಪಿ ಆಯೋಜಸಿರುವ ಡಾ.ನಿ.ಬೀ.ಅಣ್ಣಾಜಿ ಬಲ್ಲಾಳ್ ಅವರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ರಂಗಭೂಮಿಗೆ ಪ್ರಸ್ತುತ ೬೦ ವರ್ಷ ತುಂಬಿದ್ದು, ಈ ಬಾರಿ ಶಾಲಾ ಕಾಲೇಜುಗಳಲ್ಲಿ ರಂಗ ಶಿಕ್ಷಣ ಹಮ್ಮಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಸುಮಾರು ೧೨ ಶಾಲೆಗಳಲ್ಲಿ ಈ ಪ್ರಯೋಗ ಯಶಸ್ವಿಗಾಗಿ ನಡೆದಿದ್ದು, ೪೨೦ಕ್ಕೂ ಅಧಿಕ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ನಮ್ಮ ಈ ಯೋಜನೆಗೆ ಸಂಘಸಂಸ್ಥೆಗಳು ಸೇರಿದಂತೆ ಎಲ್ಲ ಕಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಂಗಶಿಕ್ಷಣವನ್ನು ಇನ್ನಷ್ಟು ಶಾಲೆಗೆ ವಿಸ್ತರಿಸುವ ಯೋಜನೆಯಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ರಂಗಭೂಮಿ ಉಡುಪಿ ಉಪಾಧ್ಯಕ್ಷ ಎನ್.ಆರ್.ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.ನಾಟಕೋತ್ಸವದಲ್ಲಿ ಭಾನುವಾರ ‘ಮಾಲತೀ ಮಾಧವ’ ಹಾಗೂ ಸೋಮವಾರ ‘ಅಂಕದ ಪರದೆ’ ನಾಟಕಗಳು ಪ್ರಸ್ತುತಿಗೊಂಡವು.