ಜಾನಪದ ಎಂದಿಗೂ ಸ್ಥಾಯಿ ಅಲ್ಲ

| Published : Feb 10 2025, 01:51 AM IST

ಸಾರಾಂಶ

ಜನಪದರು ಎಂದಿಗೂ ಬೌದ್ಧಿಕ ಹಕ್ಕು ಸ್ವಾಮ್ಯತೆಗಾಗಿ ಹೊಡೆದಾಡಿದವರಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಜಾನಪದ ಕಥಾನಕಗಳಿಗೆ ಹೊಸ ಹೊಸ ಸಂಗತಿಗಳನ್ನು ಸೇರಿಸಿಕೊಂಡು ಹೋಗಬೇಕು. ಅದು ಎಂದಿಗೂ ಸ್ಥಾಯಿಯಾಗಿ ಸ್ಥಗಿತವಾಗಿ ನಿಲ್ಲುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಹೇಳಿದರು.ನಗರದ ಕಿರುರಂಗಮಂದಿರ ಆವರಣದಲ್ಲಿ ರಂಗಯಾನ ಟ್ರಸ್ಟ್ ಮೈಸೂರು ವತಿಯಿಂದ ಭಾನುವಾರ ನಡೆದ ಡಾ. ಸುಜಾತಾ ಅಕ್ಕಿ ನಾಟಕೋತ್ಸವದ ಎರಡನೇ ದಿನ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನಪದರು ಎಂದಿಗೂ ಬೌದ್ಧಿಕ ಹಕ್ಕು ಸ್ವಾಮ್ಯತೆಗಾಗಿ ಹೊಡೆದಾಡಿದವರಲ್ಲ. ವಚನ ಸಾಹಿತ್ಯ, ದಾಸ ಸಾಹಿತ್ಯಕ್ಕೆ ಅಂಕಿತವಿದೆ. ಆದರೆ, ಜಾನಪದಕ್ಕೆ ಎಂದಿಗೂ ಅಂಕಿತ ಒತ್ತಿಲ್ಲ. ಜಾನಪದ ಕಥಾನಕಗಳಿಗೆ ಹೊಸ ಹೊಸ ಸಂಗತಿಗಳನ್ನು ಸೇರಿಸಿಕೊಂಡು ಹೋಗಬೇಕು. ಅದು ಎಂದಿಗೂ ಸ್ಥಾಯಿಯಾಗಿ ಸ್ಥಗಿತವಾಗಿ ನಿಲ್ಲುವುದಿಲ್ಲ. ನಾನು ಎಂಬ ಸಂಗತಿಯಿಂದ ಜನಪದರು ದೂರ ಇರುತ್ತಾರೆ. ಇದೇ ಜನಪದದ ನಿಜವಾದ ಶಕ್ತಿ. ಜಾನಪದರ ಯಾವ ಕೃತಿಗಳಿಗೂ ಕಾಪಿರೈಟ್ಸ್ ಇಲ್ಲ ಎಂದು ಅವರು ತಿಳಿಸಿದರು.ಸುಜಾತ ಅಕ್ಕಿ ಅವರು ಜಾನಪದ ಕಥಾನಕದ ಹಿನ್ನೆಲೆ ಇರುವ ವಸ್ತುವನ್ನೇ ಆಯ್ಕೆ ಮಾಡಿಕೊಳ್ಳುವುದು ಖುಷಿಯ ವಿಷಯ. ಜಾತಿ ಮೀರಿದ ಪ್ರಣಯ ಪ್ರಸಂಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಚಾಮಚಲುವೆ, ಸೋಲಿಗರ ಬಾಲೆ ಇದಕ್ಕೊಂದು ಉದಾಹರಣೆ ಎಂದರು.ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಾಟಕೋತ್ಸವ ನಡೆಯುವುದು ವಿಶೇಷ. ಅದರಲ್ಲೂ ಒಬ್ಬ ಮಹಿಳೆ ಹೆಸರಲ್ಲಿ ನಾಟಕೋತ್ಸವ ನಡೆಯುತ್ತಿರುವುದು ಅಭಿಮಾನದ ಹಾಗೂ ಹೆಮ್ಮೆಯ ವಿಚಾರ. ಮಹಿಳೆಯರು ಹಲವು ದಶಕದಿಂದ ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ ಫಲ ಸಿಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳೆಯರ ಹೆಸರಿನಲ್ಲಿ ನಾಟಕೋತ್ಸವ ನಡೆಯಲಿ. ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿ ಎಂದು ಅವರು ಆಶಿಸಿದರು.ಇಂದು ಹವ್ಯಾಸಿ ರಂಗತಂಡಗಳು ಉತ್ತಮ ಕೆಲಸ ಮಾಡುತ್ತಿವೆ. ಅದರಲ್ಲಿ ರಂಗಯಾನ ಟ್ರಸ್ಟ್ ಕೂಡ ಉತ್ತಮ ಕೆಲಸ ಮಾಡುತ್ತಿದೆ. ಹಾಡಿಗಳಿಗೆ ಹೋಗಿ ಅಲ್ಲಿನ ಮಕ್ಕಳು, ಯುವಸಮೂಹಕ್ಕೆ ನಾಟಕ ಹೇಳಿಕೊಟ್ಟು ಅದರ ಪ್ರದರ್ಶನ ಕೂಡ ಏರ್ಪಡಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಅವರು ಹೇಳಿದರು.ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಇಂದಿನ ಶಾಸ್ತ್ರೀಯ ಪ್ರಕಾರಗಳು ಜಾನಪದದಿಂದಲೇ ಬಂದಿವೆ. ಜನಪದಕ್ಕೆ ಕೊನೆ ಇಲ್ಲ. ಶೇಕ್ಸ್ ಪಿಯರ್‌ ನ ನಾಟಕಗಳಲ್ಲೂ ನಾವು ಜಾನಪದ ಕಥೆ ಕಾಣಬಹುದು. ರಂಗಯಾನ ತನ್ನ ದಶಮಾನೋತ್ಸವವನ್ನು ಡಾ. ಸುಜಾತ ಅಕ್ಕಿ ಹೆಸರಿನಲ್ಲಿ ನಡೆಸುತ್ತಿರುವುದು ಖುಷಿಯ ವಿಚಾರ ಎಂದು ಅವರು ತಿಳಿಸಿದರು.ನಾಟಕಕಾರ್ತಿ ಡಾ. ಸುಜಾತ ಅಕ್ಕಿ, ಶಾಲಾ ಶಿಕ್ಷಣ ಸಿಬ್ಬಂದಿ ಮಂಜುನಾಥ್ ಇತರರು ಇದ್ದರು. ಇದೇ ವೇಳೆ ವಿಕಾಸ ಚಂದ್ರ ನಿರ್ದೇಶನದ ಸೋಲಿಗರ ಬಾಲೆ ನಾಟಕ ಪ್ರದರ್ಶನ ಕಂಡಿತು.