ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ ‘ರಂಗಭೂಮಿ ರಂಗ ಶಿಕ್ಷಣ’ ಅಭಿಯಾನದಲ್ಲಿ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಮಕ್ಕಳಲ್ಲಿ ರಂಗಪ್ರಜ್ಞೆ ಬೆಳೆಸಿದರೇ ಅವರಲ್ಲಿ ನೈತಿಕ ಮೌಲ್ಯಗಳು ಹುಟ್ಟಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ ‘ರಂಗಭೂಮಿ ರಂಗ ಶಿಕ್ಷಣ’ ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಮನೋವಿಕಾಸದ ಜೊತೆಗೆ, ಎಲ್ಲರ ಮುಂದೆ ಮಾತನಾಡುವ ಧೈರ್ಯ, ಭಾಷಾ ಜ್ಞಾನ, ಬದುಕನ್ನು ಎದುರಿಸುವ ಪಾಠ ದೊರೆಯುತ್ತದೆ. ಮುಂದೆ ಅವರು ಎಲ್ಲರೂ ಕಲಾವಿದರಾಗದಿದ್ದರೂ, ಒಂದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅವರಿಂದ ಕೊಡುಗೆ ಖಂಡಿತ ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ಶಾಲಾ ಕಾಲೇಜು ಮಕ್ಕಳಿಗೆ ರಂಗ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದವರು ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಎಚ್‌ಪಿಆರ್ ಸಂಸ್ಥೆಯ ಮುಖ್ಯಸ್ಥ ಹರಿಪ್ರಸಾದ್ ರೈ ಕೇವಲ ಅಂಕ ಗಳಿಸುವುದೇ ಮೂಲ ಉದ್ದೇಶ ಹೊಂದಿರುವ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವಿದೆ. ರಂಗ ಶಿಕ್ಷಣ ಮೂಲಕ ಮಕ್ಕಳಲ್ಲಿ ಜೀವನ ಪಾಠ ಕಲಿಸಲು ಮುಂದಾಗಿರುವ ರಂಗಭೂಮೀ ಉಡುಪಿ ಸಂಸ್ಥೆ ಅಭಿನಂದನಾರ್ಹ ಎಂದು ಅವರು ತಿಳಿಸಿದರು.ಮುಖ್ಯ ಅತಿಥಿಯಾಗಿ ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ವಿಶ್ವನಾಥ್ ಪೈ ಆಗಮಿಸಿದ್ದರು. ರಂಗಭೂಮಿ ಉಪಾಧ್ಯಕ್ಷರಾದ ರಾಜಗೋಪಾಲ್ ಬಲ್ಲಾಳ್ ಹಾಗೂ ಭಾಸ್ಕರ್ ರಾವ್ ಕಿದಿಯೂರು, ಖಜಾಂಚಿ ಭೋಜ, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ವೇದಿಕೆಯಲ್ಲಿದ್ದರು. ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಸ್ವಾಗತಿಸಿದರು. ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅಮಿತಾಂಜಲಿ ಕಿರಣ್ ವಂದಿಸಿದರು. ಈ ಸಂದರ್ಭದಲ್ಲಿ ರಂಗ ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಗೌರವಾರ್ಪಣೆ ನಡೆಯಿತು.