ರಂಗಭೂಮಿ ತರಬೇತಿ ಸಾಂಸ್ಕೃತಿಕ ಸನ್ಮಾರ್ಗದ ಕೆಲಸ: ಸತೀಶ್ ತಿಪಟೂರು

| Published : Feb 08 2025, 12:30 AM IST

ರಂಗಭೂಮಿ ತರಬೇತಿ ಸಾಂಸ್ಕೃತಿಕ ಸನ್ಮಾರ್ಗದ ಕೆಲಸ: ಸತೀಶ್ ತಿಪಟೂರು
Share this Article
  • FB
  • TW
  • Linkdin
  • Email

ಸಾರಾಂಶ

ರಂಗಾಯಣದ ಮಾಡಬೇಕಾದ ಕೆಲಸವನ್ನು ಹವ್ಯಾಸ ರಂಗಭೂಮಿ ತಂಡಗಳು ಮಾಡುತ್ತಿವೆ. ಹವ್ಯಾಸಿ ರಂಗಭೂಮಿ ತಂಡಗಳು ರಂಗ ಶಿಬಿರಗಳ ಮೂಲಕ ಸಾಂಸ್ಕೃತಿಕ ಲೋಕದಲ್ಲಿ ಸಣ್ಣ ಬೀಜಗಳನ್ನು ಬಿತ್ತುತ್ತಿವೆ. ಇದು ಭವಿಷ್ಯದಲ್ಲಿ ಮೈಸೂರಿನ ಸಾಂಸ್ಕೃತಿಕ ಲೋಕ ವಿಕಾಸಗೊಳಿಸಲಿದೆ. ಹೊಸ ಪ್ರತಿಭೆಗಳ ಉದಯಕ್ಕೂ ಕಾರಣವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ತರಬೇತಿಯು ಯುವಕ, ಯುವತಿಯರನ್ನು ಸಾಂಸ್ಕೃತಿಕ ಸನ್ಮಾರ್ಗಕ್ಕೆ ಕೊಂಡೊಯ್ಯುವ ಕೆಲಸ. ಇದರ ಪರಿಣಾಮ ಸಮಾಜದ ಮೇಲೆ ಬಹಳ ದೊಡ್ಡದು ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ನಗರದ ರಂಗಾಯಣದ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ರಂಗಭೂಮಿ ಮತ್ತು ಜನಪದ ಕಲಾ ಪ್ರಕಾರಗಳ ತರಬೇತಿ ಶಿಬಿರವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಬದುಕಿನ ಅನುಭವ, ಜೀವನ ಪಾಠವನ್ನು ಕಲಿಸುತ್ತದೆ. ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗುವುದು ಕಷ್ಟಕರ. ಇದರಿಂದಾಗಿ ಹವ್ಯಾಸಿ ರಂಗಭೂಮಿ ತಂಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದರು.

ರಂಗಾಯಣದ ಮಾಡಬೇಕಾದ ಕೆಲಸವನ್ನು ಹವ್ಯಾಸ ರಂಗಭೂಮಿ ತಂಡಗಳು ಮಾಡುತ್ತಿವೆ. ಹವ್ಯಾಸಿ ರಂಗಭೂಮಿ ತಂಡಗಳು ರಂಗ ಶಿಬಿರಗಳ ಮೂಲಕ ಸಾಂಸ್ಕೃತಿಕ ಲೋಕದಲ್ಲಿ ಸಣ್ಣ ಬೀಜಗಳನ್ನು ಬಿತ್ತುತ್ತಿವೆ. ಇದು ಭವಿಷ್ಯದಲ್ಲಿ ಮೈಸೂರಿನ ಸಾಂಸ್ಕೃತಿಕ ಲೋಕ ವಿಕಾಸಗೊಳಿಸಲಿದೆ. ಹೊಸ ಪ್ರತಿಭೆಗಳ ಉದಯಕ್ಕೂ ಕಾರಣವಾಗಲಿದೆ ಎಂದು ಅವರು ಹೇಳಿದರು.

ರಂಗಾಯಣದಿಂದ ನಡೆಯುವ ಕಾಲೇಜು ರಂಗೋತ್ಸವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಒಂದೊಂದು ನಾಟಕ ಪ್ರದರ್ಶಿಸಲಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮುಂಬರುವ ಕಾಲೇಜು ರಂಗೋತ್ಸವದಲ್ಲಿ ಪಾಲ್ಗೊಳ್ಳಬೇಕು. ಇದಕ್ಕೆ ಅವಕಾಶದ ಕಲ್ಪಿಸುವ ಪ್ರಯತ್ನಿಸಲಾಗುವುದು ಎಂದರು.

ರಾಜೇಶ್ವರಿ ವಸ್ತ್ರಾಲಂಕಾರದ ಮಾಲೀಕ ಬಿ.ಎಂ. ರಾಮಚಂದ್ರ ಮಾತನಾಡಿ, ರಂಗಭೂಮಿಯಲ್ಲಿ ಸುಲಭವಾಗಿ ಅವಕಾಶ ದೊರೆಯುವುದಿಲ್ಲ. ಹೀಗಾಗಿ, ಸಿಕ್ಕಿರುವ ಅವಕಾಶವನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ, ರಂಗಭೂಮಿ ಇತಿಹಾಸವನ್ನು ರಂಗಾಸಕ್ತ ಮಕ್ಕಳು ಅರಿತುಕೊಳ್ಳಬೇಕು. ಇದರಿಂದ ನಾಟಕರಂಗದ ಅನೇಕ ಮಹನೀಯರು ಪರಿಚಯವಾಗಲಿದೆ. ಇದರಿಂದ ನಿಮ್ಮೊಳಗೆ ಗಟ್ಟಿ ಸತ್ವವನ್ನು ಸ್ಥಾಪಸಲಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಪರಿಣಾಮಕಾರಿ ಆಗಲಿದೆ ಎಂದರು.

ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು. ಉಪನ್ಯಾಸಕ ಡಾ. ಶ್ರೀಧರಮೂರ್ತಿ ನಿರೂಪಿಸಿದರು.