ಸಾರಾಂಶ
ರಂಗಭೂಮಿ ಮಕ್ಕಳ ಬಾಳು ಬೆಳಗುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ನಾಟಕ ಕಲೆ ಕರಗತ ಮಾಡಿಸಬೇಕು ಎಂದು ಡಾ. ರಾಜು ತಾಳಿಕೋಟಿ ಹೇಳಿದರು.
ಧಾರವಾಡ: ಕೇವಲ ಶುಷ್ಕ ಭೋಧನೆಯು ಆಗದೇ ಕಲಿಕೆಯಲ್ಲಿ ಗುಣಾತ್ಮಕತೆಯನ್ನು ನಾಟಕಗಳು ಒದಗಿಸುತ್ತವೆ. ಒಂದು ಪಾಠವನ್ನು ನಾಟಕಕ್ಕೆ ಅಳವಡಿಸಿ ರಂಗಕ್ಕೆ ತಂದಾಗ ವಿಷಯ ಹೆಚ್ಚು ಮನದಟ್ಟಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಹೇಳಿದರು.
ಇಲ್ಲಿಯ ಡೆ. ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ರಂಗಾಯಣದ ಸಹಯೋಗದಲ್ಲಿ 30ನೇ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ತಾವು ಅಭಿನಯಿಸಿದ ಪಾತ್ರವನ್ನು ಜೀವನದುದ್ದಕ್ಕ ನೆನಪಿಡುತ್ತಾರೆ. ರಂಗಭೂಮಿ ಮಕ್ಕಳ ಬಾಳು ಬೆಳಗುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ನಾಟಕ ಕಲೆ ಕರಗತ ಮಾಡಿಸಬೇಕು. ಮಕ್ಕಳಿಗೆ ಕಲೆ, ಸಂಗೀತ, ಸಾಹಿತ್ಯದ ಅರಿವು ಅವಶ್ಯ. ಇದರಿಂದ ಅವರ ಸರ್ವಾಂಗೀಣ ವ್ಯಕ್ತಿತ್ವ ಅರಳಲು ಸಾಧ್ಯವಾಗಲಿದೆ ಎಂದರು. ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ. ಕೊಡ್ಲಿ ಮಾತನಾಡಿ, ದತ್ತಿದಾನಿಗಳ ನೆರವಿನಿಂದ ನಾಟಕೋತ್ಸವ ನಡೆಯುತ್ತಿವೆ. ಎಲ್ಲ ನಾಟಕ ತಂಡಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಮುಂದಿನ ವರ್ಷದಿಂದ ಬಹುಮಾನ ಪ್ರೋತ್ಸಾಹಧನ ಹೆಚ್ಚಿಸುವ ಯೋಜನೆ ಹೊಂದಿದ್ದೇವೆ ಎಂದರು.ಸಂಯೋಜಕ ಕೆ.ಎಚ್. ನಾಯಕ, ಚಿಂತಕ ಎಂ.ಎಂ. ಚಿಕ್ಕಮಠ, ನಿಂಗಣ್ಣ ಕುಂಟಿ, ಎಸ್.ಎಂ. ದಾನಪ್ಪಗೌಡರ, ಬಿ.ಜಿ. ಬಾರಕಿ, ಡಾ. ಕುಮುದ್ವತಿ ಭರಮಗೌಡರ, ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ, ಪ್ರಮಿಳಾ ಜಕ್ಕಣ್ಣವರ ಇದ್ದರು. ನಂತರ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಿಂದ ನಾಟಕಗಳು ಪ್ರದರ್ಶನಗೊಂಡವು.