ಸಿ.ಕೆ. ನಾಗರಾಜ
ಮರಿಯಮ್ಮನಹಳ್ಳಿ:
ಕಲಾನಿಧಿ ಪ್ರಶಸ್ತಿ ಪುರಸ್ಕೃತೆ, ವೃತ್ತಿರಂಗಭೂಮಿ ಕಲಾವಿದೆ ಅಕಾರಿ ಚಂದ್ರಮ್ಮ (ಚಂದ್ರಕಲಾ) (74) ಭಾನುವಾರ ಅಸ್ತಂಗತರಾದರು. ಸೋಮವ್ವ, ಮಹದೇವಪ್ಪ ದಂಪತಿಯ ಮಗಳಾಗಿ ಚಂದ್ರಮ್ಮ 1952ರಲ್ಲಿ ಜನಿಸಿದರು. 1960-70ರಲ್ಲಿ ಮರಿಯಮ್ಮನಹಳ್ಳಿಯಲ್ಲಿ ಎರಡನೇ ತಲೆಮಾರಿನ ರಂಗಕಲಾವಿದೆಯರ ಪರ್ವ ಶುರುವಾಗಿತ್ತು. ಆಗ ರಂಗಭೂಮಿಗೆ ಚಂದ್ರಮ್ಮ ಪ್ರವೇಶ ಮಾಡಿದರು. ಮರಿಯಮ್ಮನಹಳ್ಳಿಯಲ್ಲಿ ವೃತ್ತಿ ರಂಗಭೂಮಿಗೆ ರಂಗಪರಿಕರಗಳನ್ನು ವ್ಯವಸ್ಥೆಗೊಳಿಸುತ್ತಿದ್ದ ನರಸಿಂಹಚಾರ್, ಗೌಳೇರ್ ಮೈಲಾರಪ್ಪ ಶಾಲಾ ರಜಾ ದಿನಗಳಲ್ಲಿ ಚಿಕ್ಕ ಹುಡುಗಿಯರನ್ನು ಕರೆದುಕೊಂಡು ನಾಟಕದ ತಾಲೀಮು ಹೇಳಿಕೊಡುತ್ತಿದ್ದರು. ಇವರ ಗರಡಿಯಲ್ಲಿ ಬೆಳೆದು ಬಂದ ಅಕಾರಿ ಚಂದ್ರಮ್ಮ ನಾಟಕದಲ್ಲಿ ಪಾತ್ರ ಮಾಡುತ್ತಾ ಚಂದ್ರಕಲಾ ಎಂದು ರಂಗಭೂಮಿಯಲ್ಲಿ ಗುರುತಿಸಿಕೊಂಡರು.ಚಂದ್ರಮ್ಮಗೆ ರಂಗಭೂಮಿ ಗೀಳು ಬಾಲ್ಯದಿಂದಲೂ ಇದ್ದುದರಿಂದ ಕೇವಲ 5ನೇ ತರಗತಿವರೆಗೆ ಓದಿದರು. ಬಡತನ ದಿನಗಳಲ್ಲಿ ಅವರು ವಿಧ್ಯಾಭ್ಯಾಸ ಅರ್ಥಕ್ಕೆ ಮೊಟಕುಗೊಳಿಸಿ, ತಮ್ಮ ಎಂಟನೇ ವಯಸ್ಸಿನಲ್ಲೇ ರಂಗಭೂಮಿಗೆ ಪ್ರವೇಶ ಮಾಡಿದರು.ಚಂದ್ರಮ್ಮ ಮೊದಲು ರಂಗಭೂಮಿಯಲ್ಲಿ ಪಾತ್ರ ಮಾಡುವಾಗ ಅವರ ಅಭಿನಯಕ್ಕೆ ಕೇವಲ ₹20-30 ಸಿಗುತ್ತಿತ್ತು. ಇದೇ ಅವರ ಜೀವನಕ್ಕೆ ಬಹುದೊಡ್ಡದ ಸಂಭಾವನೆಯಾಗಿತ್ತು. ಅವರ ಸಂಗ್ಯಾಬಾಳ್ಯ ನಾಟಕದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು. ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ ಪಾತ್ರವನ್ನು ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡು, ಅನೇಕ ವರ್ಷಗಳ ಕಾಲ ರಂಗಭೂಮಿ ಸೇವೆ ಸಲ್ಲಿಸುತ್ತಿರುವಾಗ ಏಣಗಿ ಬಾಳಪ್ಪ ಅವರ ನಾಟಕ ಕಂಪನಿ, ಸಾಳುಂಕೆ ಕಂಪನಿ, ಹುಬ್ಬಳ್ಳಿಯ ಪಡೆಸೂರು ಕಂಪನಿ (ಪಡೆಸೂರು ಸಿದ್ದಣ್ಣ ಕಂಪನಿ), ನೆಗಳೂರು ಕಂಪನಿ, ಸಿದ್ದೇಶ್ವರ ನಾಟಕ ಸಂಘದಲ್ಲಿ ಅಣ್ಣ-ತಂಗಿ, ಆದರ್ಶ ಪ್ರೇಮ, ಬಸ್ ಕಂಡಕ್ಟರ್, ಹಡೆದವ್ವ ಸೇರಿದಂತೆ ಇತರೆ ನಾಟಕಗಳಲ್ಲಿ ಅಭಿನಯಿಸಿದ್ದರು.ಗೋವಾದಲ್ಲಿ ನಾಟಕ ಕಂಪನಿ ಹಾಕಿದಾಗ ಗೋವಾ, ಆಂಧ್ರಪ್ರದೇಶದಲ್ಲಿ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ಹೇಮರೆಡ್ಡಿ ಮಲ್ಲಮ್ಮ, ರಕ್ತರಾತ್ರಿ, ಕುರುಕ್ಷೇತ್ರ ನಾಟಕದಲ್ಲಿ ಉತ್ತರೆ, ಭಾನುಮತಿ, ಮದಾಂಶಿ ಪಾತ್ರಗಳಲ್ಲಿ ಅಭಿನಯಿಸಿದ್ದರು. ಕೇವಲ ಐತಿಹಾಸಿಕ, ಪೌರಾಣಿಕ ನಾಟಕಗಳಷ್ಟೇ ಅಲ್ಲದೇ ಸಾಮಾಜಿಕ, ಬಯಲಾಟಗಳಲ್ಲಿ ಚಂದ್ರಮ್ಮ ಅಭಿನಯಿಸಿದರು. ಕಪಟ ಕಾರಸ್ತಾನ, ಭಾಗ್ಯದೇವತೆ, ಸಂಸಾರ, ಪುತ್ಥಳಿ ನಾಟಕದಲ್ಲಿ ಪುರುಷ ಪಾತ್ರಗಳನ್ನು ಅಭಿನಯಿಸಿದ್ದು, ಬಂಧುದ್ರೋಹ ನಾಟಕದಲ್ಲಿ ಸ್ತ್ರೀ, ಪುರುಷರ ಪಾತ್ರಗಳನ್ನು ಮಹಿಳೆಯರು ಅಭಿನಯಿಸಿದ ಈ ನಾಟಕವು ಅತಿಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು.ಕಳೆದ ಕೆಲವು ವರ್ಷಗಳಿಂದ ರಂಗಭೂಮಿಯಿಂದ ದೂರು ಉಳಿದುಕೊಂಡಿದ್ದರು. ಬಣ್ಣದ ಬದುಕಿನೊಂದಿಗೆ ತನ್ನ ಸಂಸಾರದಲ್ಲಿ ಮೂವರು ಹೆಣ್ಣುಮಕ್ಕಳು, ಪುತ್ರ ಸೇರಿದಂತೆ ನಾಲ್ಕು ಜನರನ್ನು ಪದವಿವರೆಗೂ ಉತ್ತಮ ವಿದ್ಯಾಭ್ಯಾಸ ಮಾಡಿಸಿ, ಒಬ್ಬ ಮಗಳು ನೌಕರಿ ಮಾಡುತ್ತಿದ್ದಾರೆ. ಮಗ ಸಹ ಮರಿಯಮ್ಮನಹಳ್ಳಿಯ ಪಪಂ ಸದಸ್ಯನಾಗಿ ಸಮಾಜ ಸೇವೆಯಲ್ಲಿದ್ದಾರೆ. ಚಂದ್ರಮ್ಮ ಸಹ ಮರಿಯಮ್ಮನಹಳ್ಳಿ ಗ್ರಾಪಂ ಸದಸ್ಯೆಯಾಗಿ ಜನಸೇವೆ ಸಲ್ಲಿಸಿದ್ದಾರೆ.ಇವರ ಕಲಾ ಸೇವೆಯನ್ನು ಗುರುತಿಸಿ ಮರಿಯಮ್ಮನಹಳ್ಳಿಯ ಲಲಿತ ಕಲಾರಂಗವು ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೇ ರೀತಿ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.