ಕನ್ನಡಪ್ರಭ ವಾರ್ತೆ ಭದ್ರಾವತಿ

ಪ್ರಸ್ತುತ ರಂಗ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಇಂತಹ ಕಾಲಘಟ್ಟದಲ್ಲಿ ರಂಗ ಕಲಾವಿದರು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಹೇಳಿದರು.

ಅವರು ಶುಕ್ರವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ರಂಗ ಕಲಾವಿದರು ತಂಡದಿಂದ ಕಾಗದನಗರದ ವಿಕಸಂ, ಲಲಿತ ಕಲಾ ಸಂಘ, ಶಾಂತಲಾ ಕಲಾ ವೇದಿಕೆ, ಮಿತ್ರ ಕಲಾ ಮಂಡಳಿ ಮತ್ತು ಅಪರಂಜಿ ಅಭಿನಯ ಶಾಲೆ ಹಾಗೂ ನವೋದಯ ಕಲಾ ಸಂಘದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ `ವಿಶ್ವ ರಂಗಭೂಮಿ ದಿನಾಚರಣೆ'''''''' ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಕ್ಷೇತ್ರಗಳಲ್ಲೂ ಇಂದು ಬದಲಾವಣೆಗಳಾಗುತ್ತಿವೆ. ಅಭಿನಯದ ಮೂಲ ನೆಲೆ ರಂಗಭೂಮಿಯಾಗಿದ್ದು, ಈ ಮೂಲಕ ಗುರುತಿಸಿಕೊಂಡವರು ಇಂದು ಉನ್ನತ ಸ್ಥಾನಕ್ಕೆ ಬೆಳೆದಿದ್ದಾರೆ. ಆದರೆ ಇಂದು ರಂಗ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕಲಾವಿದರ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.


ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ನೌಕರ, ವಿಕಸಂ ಹಿರಿಯ ರಂಗಭೂಮಿ ಕಲಾವಿದ ಡಿ. ರುದ್ರಯ್ಯ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿದರು. ಹಿರಿಯ ರಂಗ ಕಲಾವಿದರಾದ ಶಿವಾನಂದಮೂರ್ತಿ(ಬಸವರಾಜ್) ಮತ್ತು ವೈ.ಕೆ ಹನುಮಂತಯ್ಯ ಡಿ. ರುದ್ರಯ್ಯರವರ ಕುರಿತು ಮಾತನಾಡಿ, ಎಲ್ಲಾ ರೀತಿಯ ಅಭಿನಯ ಮಾಡುವ ಕಲೆ ರುದ್ರಯ್ಯರವರು ಹೊಂದಿದ್ದರು. ಅವರಿಗೆ ಹಲವಾರು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇಂತಹ ಹಿರಿಯ ಕಲಾವಿದರಿಂದ ಕಾರ್ಯಕ್ರಮ ಉದ್ಘಾಟಿಸಿರುವುದು ಹೆಮ್ಮೆ ವಿಚಾರವಾಗಿದೆ ಎಂದರು.

ರಂಗ ಕಲಾವಿದರು ತಂಡದ ಉಪಾಧ್ಯಕ್ಷ ಜಿ. ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ತಮಟೆ ಜಗದೀಶ್ ನಿರೂಪಿಸಿದರು. ಗಾಯಕ ಶಂಕರ್ ಬಾಬು ಪ್ರಾರ್ಥಿಸಿದರು. ಮಿತ್ರ ಕಲಾ ಮಂಡಳಿ ತಂಡದಿಂದ ರಂಗ ಗೀತೆ ಗಾಯನ, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕಿರು ನಾಟಕ ನಡೆಯಿತು.

ರಂಗ ಕಲಾವಿದರು ತಂಡದ ಖಜಾಂಚಿ ಕೆ.ಎಸ್ ರವಿಕುಮಾರ್ ಹಾಗೂ ಸಹ ಕಾರ್ಯದರ್ಶಿ ಬಿ. ಚಿದಾನಂದ ಮತ್ತು ಸದಸ್ಯರಾದ ಪ್ರವೀಣ್ ಕುಮಾರ್, ಎಂ. ಮಂಜುಳ, ರತ್ನ ಇದ್ದರು.

ಶಿವಮೊಗ್ಗ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್, ಹಿರಿಯ ರಂಗಭೂಮಿ ಕಲಾವಿದರಾದ ಜಿ. ರವಿಕುಮಾರ್, ಫ್ರಾನ್ಸಿಸ್, ಜಯಲಕ್ಷ್ಮೀ ರುದ್ರಯ್ಯ, ಕಮಲಕುಮಾರಿ ಸೇರಿದಂತೆ ಎಲ್ಲಾ ಪ್ರಕಾರದ ಕಲಾವಿದರು ಪಾಲ್ಗೊಂಡಿದ್ದರು.