ಮುಂಡರಗಿ: 2026ರ ವಿಶ್ವ ರಂಗಭೂಮಿ ದಿನ ಪ್ರಯುಕ್ತ ಅಮೆರಿಕಾದ ರಂಗಕರ್ಮಿ ವಿಲಿಂ ಡೆಪೋ ಅವರು " ರಂಗಭೂಮಿ ಒಂದು ಶಾಂತಿಯ ಸಂಸ್ಕೃತಿ " ಎಂಬ ಪರಿಕಲ್ಪನೆಯ ಸಂದೇಶ ರವಾನಿಸಿದ್ದಾರೆ. ಇಂದು ಜಗತ್ತಿಗೆ ಶಾಂತಿಯ ಸಂದೇಶದ ಅಗತ್ಯವಿದೆ ಎಂದು ರಂಗ ನಿರ್ದೇಶಕ ಸಂತೋಷ ಅಂಗಡಿ ನುಡಿದರು.
ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಎಲ್ಲ ಸೃಜನಶೀಲ ಕಲಾ ಪ್ರಕಾರಗಳು ತಮ್ಮದೇ ಆದ ಪ್ರತ್ಯೇಕ ಅವಯವಗಳನ್ನು ಬಳಸಿಕೊಳ್ಳುತ್ತವೆ. ಚಿತ್ರಕಲಾವಿದರಿಗೆ ಬಣ್ಣ ಮತ್ತು ಕುಂಚ, ವಾದ್ಯಗಾರರಿಗೆ ವಾದ್ಯಗಳು, ಸಂಗೀತಗಾರರಿಗೆ ಕಂಠ, ಹೀಗೆ ರಂಗಕಲಾವಿದರು ತಮ್ಮ ದೇಹದ ಸಂಪೂರ್ಣ ಅವಯವಗಳನ್ನು ದೇಹ, ಭಾಷೆಯ ಮೂಲಕ ಅಭಿವ್ಯಕ್ತಿಗಾಗಿ ಬಳಸಿಕೊಳ್ಳುತ್ತಾರೆ, ನಟರಿಗೆ ದೇಹ ಮತ್ತು ಧ್ವನಿಯ ಮೂಲಕವೇ ಕಲಾಭಿವ್ಯಕ್ತಿ ಸಾಧ್ಯವಾಗುತ್ತದೆ. ಇಂದು ಜಾಗತಿಕ ಮಟ್ಟದಲ್ಲಿ ಪ್ರತಿಷ್ಠೆಗಾಗಿ ಯುದ್ಧೋನ್ಮಾದ ಹರಡಿಕೊಂಡಿದೆ. ರಂಗಭೂಮಿ ವಿಶ್ವ ಶಾಂತಿಗಾಗಿ ತನ್ನ ಪರಂಪರೆಯನ್ನು ವಿಸ್ತರಿಸಿಕೊಂಡಿದೆ. ಜಗತ್ತಿನ ಎಲ್ಲ ಕೆಡುಕುಗಳಿಗೆ ಉತ್ತರ ಹುಡುಕುವ ಮಾನವೀಯ ತುಡಿತದತ್ತ ರಂಗಭೂಮಿ ಕ್ರಿಯಾಶೀಲವಾಗಿರುತ್ತದೆ ಎಂದರು.
ನಟ ಮಾಂತೇಶ ತ್ಯಾಮನವರ ತಮ್ಮ ರಂಗಭೂಮಿಯ ಅನುಭವಗಳನ್ನು ಹಂಚಿಕೊಂಡರಲ್ಲದೇ ಪ್ರಸ್ತುತ ಅಭಿನಯಿಸುತ್ತಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ''''''''ಕುಂವಿ''''''''ಅವರ ಅರಮನೆ ಕಾದಂಬರಿ ಆಧಾರಿತ ಧಾರಾವಾಹಿ ಕುರಿತು ಅನುಭವ ಹಂಚಿಕೊಂಡರು.ಶಾಲಾ ಮುಖ್ಯೋಪಾಧ್ಯಾಯ, ನಾಟಕಕಾರ ಡಾ. ನಿಂಗು ಸೊಲಗಿ ಮಾತನಾಡಿ, ರಂಗಭೂಮಿಗೆ ಎರಡು ಮುಖಗಳಿದ್ದು, ಒಂದು ವಿಲಾಸ, ಮತ್ತೊಂದು ವಿಕಾಸದ ಮುಖ. ಶಾಲಾ ಅಂಗಳದಲ್ಲಿ ವಿಕಾಸದ ಮುಖವಾಣಿಯಾಗಿ ರಂಗ ಭೂಮಿ ಬಳಸಿಕೊಳ್ಳುತ್ತ ಮಕ್ಕಳಲ್ಲಿ ಮನೋರಂಜನೆಯೊಂದಿಗೆ ಮನೋವಿಕಾಸ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಶರಣಪ್ಪ ದಂಡಿನ, ಶಿಕ್ಷಕಿ ಪ್ರಭಾವತಿ ಗಾಡದ, ಶಿವಲೀಲಾ ಅಬ್ಬಿಗೇರಿ ಉಪಸ್ಥಿತರಿದ್ದರು. ಶಿಕ್ಷಕ ಬಿ.ಎಚ್. ಹಲವಾಗಲಿ ನಿರೂಪಿಸಿದರು.