ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ರಂಗಭೂಮಿ ಇಂದು ಕಲಾಸ್ತಕರ ಕೊರತೆಯನ್ನು ಎದುರಿಸುತ್ತಿದ್ದು,ಈ ಕ್ಷೇತ್ರದಲ್ಲಿ ತೊಡಗಿರುವವರು ತಮ್ಮ ಉಳಿವಿನ ಜೊತೆಗೆ, ರಂಗಭೂಮಿಯ ಇರುವಿಕೆಗಾಗಿ ಅಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಪ್ರಚಾರ ಮಾಡುವ ಮೂಲಕ ತನ್ನತ್ತ ಸೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ, ತುಮಕೂರು, ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 5 ದಿನಗಳ ಯುಗಾದಿ ನಾಟಕೋತ್ಸವ-2025 ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು, ಹಿರಿಯ ಕಲಾವಿದರುಗಳಿಗೆ ರಂಗಗೌರವ ಸಮರ್ಪಿಸಿ ಮಾತನಾಡಿದರು.
ರಂಗಭೂಮಿಯ ಬಗ್ಗೆ ಕುತೂಹಲ ಹೆಚ್ಚಿದೆ. ಮುಂದಿನ ಹತ್ತು ವರ್ಷಕ್ಕೆ ಏನಾಗಬಹುದು, ಅಸ್ತಿತ್ವದಲ್ಲಿ ಇರುತ್ತದೆಯೋ, ಇಲ್ಲವೋ ಎಂಬ ಆಂತಕವನ್ನು ಹುಟ್ಟಿಸುತ್ತದೆ. ಇದೊಂದು ಪ್ರಬಲ ಮಾಧ್ಯಮವಾಗಿದ್ದು, ಉಳಿಸಿಕೊಳ್ಳುವ ಅನಿವಾರ್ಯತೆ ಕಲಾವಿದರು ಮತ್ತು ಕಲಾಸಕ್ತರು ಇಬ್ಬರಿಗೂ ಸೇರಿದೆ ಎಂದರು.ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಕಲಾವಿದರಿಗೆ ಅತಿದೊಡ್ಡ ಪ್ರಶಸ್ತಿ ಎಂದರೆ ಅದು ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ಅಂತಹ ಪ್ರಶಸ್ತಿಯನ್ನು ಹೆಚ್ಚು ಪಡೆದುಕೊಂಡಿರುವುದು ತುಮಕೂರು ಜಿಲ್ಲೆಯ ಕಲಾವಿದರು, ನಾಟಕರತ್ನ ಗುಬ್ಬಿ ವೀರಣ್ಣ, ಅವರ ಪತ್ನಿ ಜಯಮ್ಮ, ಮೊಮ್ಮಗಳು ಜಯಶ್ರೀ, ಮಾಸ್ಟರ್ ಹಿರಣ್ಣಯ್ಯ, ಡಾ.ಲಕ್ಷ್ಮಣದಾಸ್, ಕಲ್ಮನೆ ನಂಜಪ್ಪ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಸ್ವತಃ ರಾಷ್ಟ್ರಪತಿಗಳೇ ನೀಡುವುದರಿಂದ ಇದಕ್ಕೆ ಬಹಳ ಮಹತ್ವವಿದೆ. ಹಾಗಾಗಿ ತುಮಕೂರಿಗೆ ಕಲೆಯಲ್ಲಿ ಮಹತ್ವದ ಸ್ಥಾನವಿದೆ.ಹಲವಾರು ಕಲಾವಿದರನ್ನು ಹುಟ್ಟು ಹಾಕಿ, ಬೆಳೆಸಿದೆ ಎಂದರು.
ಇಂದು ಕಲಾವಿದರು ಬೆಳೆಯುತ್ತಲೇ ಇದ್ದಾರೆ.ಇದಕ್ಕೆ ಹಲವಾರು ರಂಗ ಸಂಘಟನೆಗಳ ಕೊಡುಗೆ ಇದೆ ಎಂದರು. ಐದು ದಿನಗಳ ಯುಗಾದಿ ರಂಗೋತ್ಸವದ ಹಾಗೂ ಗ್ರಾಮೀಣ ಕ್ರಿಯಾತ್ಮಕ ರಂಗತಂಡದ ರಂಗ ಕಾರ‍್ಯ ಕುರಿತು ರಾಮಜೋಗಿಹಳ್ಳಿರವರು ಸಮಾರೋಪ ನುಡಿಗಳನ್ನು ನುಡಿದರು.ರಂಗಗೌರವ ಸ್ವೀಕರಿಸಿ ಮಾತನಾಡಿದ ನಗರ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ನಾನು ಕಾಲೇಜು ದಿನಗಳಲ್ಲಿ ಬೀದಿ ನಾಟಕಗಳಿಗೆ ಬಣ್ಣ ಹಚ್ಚಿದ್ದೆ. ಹಿರಿಯರಾದ ಲಕ್ಷ್ಮಣದಾಸ್ ಆಗಾಗ್ಗೆ ಕೆಲ ಸಲಹೆ, ಸೂಚನೆಗಳನ್ನು ನೀಡಿದ್ದು, ಪಾತ್ರ ಮಾಡುವಾಗ ಸಹಕಾರಿಯಾಯಿತು ಎಂದರು.
ಪೊಲೀಸ್ ಅಧಿಕಾರಿ ದಿನೇಶ್‌ಕುಮಾರ್ ಮಾತನಾಡಿ, ರಂಗಭೂಮಿಗೆ ಇಂದಿಗೂ ಜನರ ಪ್ರಬಲ ಮಾಧ್ಯಮವಾಗಿಯೇ ಉಳಿದುಕೊಂಡಿದೆ. ನಾಟಕ, ಬೀದಿ ನಾಟಕ, ಸಂಗೀತ, ನೃತ್ಯ, ಯಕ್ಷಗಾನದಂತಹ ಕಲೆಗಳ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬಹುದು. ಪೊಲೀಸ್ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ಕಲೆಯ ಮೂಲಕವೂ ಜನಸೇವೆ ಮಾಡಬಹುದು. ಮಾದಕ ವಸ್ತುಗಳ ಸೇವೆ, ಸಾಗಾಣಿಕೆ ಇಂತಹ ಸಮಾಜ ವಿದ್ರೋಹಿ ಕೃತ್ಯಗಳ ವಿರುದ್ದ ರಂಗಭೂಮಿಯನ್ನು ಪ್ರಬಲ ವೇದಿಕೆಯಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಕಲಾ ತಂಡದ ಹಿರಿಯ ಕಲಾವಿದರಾದ ಡಿವೈಎಸ್ಪಿ ಚಂದ್ರಶೇಖರ್ ಮತ್ತು ವೃತ್ತ ನಿರೀಕ್ಷಕ ದಿನೇಶಕುಮಾರ್ ಅವರುಗಳಿಗೆ 2025ನೇ ಸಾಲಿನ ರಂಗಭೂಮಿ ದಿನಾಚರಣೆಯ ರಂಗಗೌರವ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾಶ್ರೀ ಡಾ.ಲಕ್ಷ್ಮಣದಾಸ್, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ರಂಗ ಸೊಗಡು ಕಲಾಟ್ರಸ್ಟ್ನ ಸಿದ್ದರಾಜು ಸ್ವಾಂದೇನಹಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.