ಪ್ರತಿಯೊಬ್ಬರೂ ಕಲಾವಿದರಾಗಲು ಸಾಧ್ಯವಿಲ್ಲದಿದ್ದರೂ, ಇಂತಹ ಕಲಾ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಿ ಅಥವಾ ನಾಲ್ಕು ಜನರನ್ನು ಕರೆತಂದು ಪ್ರೋತ್ಸಾಹಿಸುವ ಮೂಲಕ ಕಲೆ ಹಾಗೂ ಸಂಘಟಕರನ್ನು ಬೆಂಬಲಿಸಬಹುದು.

ಸಿದ್ದಾಪುರ: ಪ್ರತಿಯೊಂದು ಮನೆಯಲ್ಲೂ ಟಿವಿ ಇದ್ದರೂ ರಂಗಭೂಮಿಯಲ್ಲಿ ನೇರವಾಗಿ ನಾಟಕ ನೋಡುವುದರಿಂದ ಸಿಗುವ ಆನಂದವೇ ಬೇರೆ. ಸಮಾಜದ ನ್ಯೂನತೆಗಳನ್ನು ತಿದ್ದಿ ಸರಿಯಾದ ದಾರಿಯಲ್ಲಿ ಮುನ್ನಡೆಸಲು ನಾಟಕ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಭಿಪ್ರಾಯಪಟ್ಟರು.

ತಾಲೂಕಿನ ಬಿದ್ರಕಾನ್ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಒಡ್ಡೋಲಗ ಹಿತ್ತಲಕೈ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ 2026 ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗಣಪತಿ ಹೆಗಡೆ ಅವರು ನಿರಂತರವಾಗಿ ಇಂತಹ ಅಪರೂಪದ ಕಲಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯ ಸಮಾಜ ಸೇವಕ ಎನ್.ವಿ. ಹೆಗಡೆ ಮುತ್ತಿಗೆ ಮಾತನಾಡಿ, ಪ್ರತಿಯೊಬ್ಬರೂ ಕಲಾವಿದರಾಗಲು ಸಾಧ್ಯವಿಲ್ಲದಿದ್ದರೂ, ಇಂತಹ ಕಲಾ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಿ ಅಥವಾ ನಾಲ್ಕು ಜನರನ್ನು ಕರೆತಂದು ಪ್ರೋತ್ಸಾಹಿಸುವ ಮೂಲಕ ಕಲೆ ಹಾಗೂ ಸಂಘಟಕರನ್ನು ಬೆಂಬಲಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಉಳಿಯಲು ಸಾರ್ವಜನಿಕರ ಇಂತಹ ಸಹಕಾರ ಅತ್ಯಗತ್ಯ ಎಂದರು.ಮತ್ತೊಬ್ಬ ಅತಿಥಿ, ಕನ್ನಡ ಉಪನ್ಯಾಸಕ ರತ್ನಾಕರ ನಾಯ್ಕ ನೆರಮುಂಡಿಗೆ ವಿಶೇಷ ಉಪನ್ಯಾಸ ನೀಡಿ, ಸಿನಿಮಾದಲ್ಲಿ ವ್ಯಕ್ತಿಯನ್ನು ಇದ್ದದ್ದಕ್ಕಿಂತ ದೊಡ್ಡದಾಗಿ ಹಾಗೂ ದೂರದರ್ಶನದಲ್ಲಿ ಚಿಕ್ಕದಾಗಿ ತೋರಿಸಿದರೆ, ರಂಗಭೂಮಿ ಬದುಕಿನ ವಾಸ್ತವತೆಯನ್ನು ನೇರವಾಗಿ ಪ್ರಸ್ತುತಪಡಿಸುತ್ತದೆ ಎಂದರು.

ವಿಶೇಷ ರಂಗ ಗೌರವ ಸ್ವೀಕರಿಸಿ ಮಾತನಾಡಿದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಸುಶೀಲಾ ಹೆಗಡೆ ಮುರೂರು, ಮಹಿಳೆಯರು ರಂಗಭೂಮಿಗೆ ಬರುವುದು ಇಂದಿಗೂ ಸವಾಲಿನ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿದ್ರಕಾನ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ವಹಿಸಿದ್ದರು. ಒಡ್ಡೋಲಗ ಸಂಸ್ಥೆಯ ಅಧ್ಯಕ್ಷ ಗಣಪತಿ ಹಿತ್ತಲಕೈ ಸ್ವಾಗತಿಸಿದರು. ಶ್ರೇಯಾ ಪ್ರಾರ್ಥಿಸಿದರು. ಸಂಧ್ಯಾ ಶಾಸ್ತ್ರಿ ನಿರೂಪಿಸಿದರು. ಪ್ರಜ್ಞಾ ಹಿತ್ತಲಕೈ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನಿಸರ್ಗ ಪ್ರಿಯ ಅವರ ಕಥಾ ರಚನೆ, ಮಂಜುನಾಥ ಬಡಿಗೇರ ಅವರ ನಿರ್ದೇಶನ ಹಾಗೂ ಭಾರ್ಗವ ಹೆಗ್ಗೋಡು ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ರಂಗ ತಂಡದ ಶುನಶ್ಯೇಪ ನಾಟಕ ಪ್ರದರ್ಶನಗೊಂಡಿತು.