ರಂಗಭೂಮಿ ಸಮಾಜ ಪರಿವರ್ತನೆಗೆ ಪ್ರಬಲ ಮಾಧ್ಯಮ: ಎನ್.ವಿ. ಶ್ರೀಕಾಂತ್

| Published : Mar 29 2025, 12:33 AM IST

ಸಾರಾಂಶ

ಪ್ರಕಾಶ ಅವರು ಸ್ಥಾಪಿಸಿದ ರಂಗಭಾರತಿ ಸಂಸ್ಥೆ 60 ವರ್ಷಗಳಿಂದ ನಿರಂತರವಾಗಿ ನಾಟಕ, ಸಾಂಸ್ಕೃತಿಕ ಚಟುವಟಿಕೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ನಟ, ನಿರ್ದೇಶಕ, ರಂಗ ಸಂಘಟಕ ಎನ್.ವಿ. ಶ್ರೀಕಾಂತ್ ಹೇಳಿದರು.

ಹೂವಿನಹಡಗಲಿ: ರಂಗಭೂಮಿ ಜೀವಂತ ಕಲೆಯಾಗಿದ್ದು, ಅದು ವೈಯಕ್ತಿಕ, ಸಾಮಾಜಿಕ ಪರಿವರ್ತನೆಗೆ ಪ್ರಬಲ ಮಾಧ್ಯಮವಾಗಿದೆ ಎಂದು ನಟ, ನಿರ್ದೇಶಕ, ರಂಗ ಸಂಘಟಕ ಎನ್.ವಿ. ಶ್ರೀಕಾಂತ್ ಹೇಳಿದರು.

ಇಲ್ಲಿನ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ, ಎಂ.ಎಂ. ಪಾಟೀಲ್ ಸ್ಮಾರಕ ದತ್ತಿ, ಎಂ.ಪಿ. ಪ್ರಕಾಶ್ ಸ್ಮಾರಕ ದತ್ತಿ, ಎಂ.ಪಿ. ಪ್ರಕಾಶ್ ಸ್ಮರಣಾರ್ಥ ದತ್ತಿ, ಎ.ಎಂ. ಹೊಳಲಯ್ಯ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ಪಿ. ಪ್ರಕಾಶ್ ವ್ಯಕ್ತಿತ್ವ, ಸಾಧನೆ ಹಾಗೂ ಹಡಗಲಿಯ ರಂಗಭೂಮಿ ಕಲಾವಿದರ ಕುರಿತು ಉಪನ್ಯಾಸ ನೀಡಿದರು.

ಎಂ.ಪಿ. ಪ್ರಕಾಶ ಅವರ ಸೈದ್ಧಾಂತಿಕ ಒಲವುಗಳು ಅವರ ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಕೊಡುಗೆಗಳನ್ನು ವಿವರಿಸುತ್ತಾ, ಅವರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸಿದರು. ಪ್ರಕಾಶ ಅವರು ಸ್ಥಾಪಿಸಿದ ರಂಗಭಾರತಿ ಸಂಸ್ಥೆ 60 ವರ್ಷಗಳಿಂದ ನಿರಂತರವಾಗಿ ನಾಟಕ, ಸಾಂಸ್ಕೃತಿಕ ಚಟುವಟಿಕೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ತಾಲೂಕಿನ ಹಿರಿಯ, ಕಿರಿಯ ರಂಗ ಕಲಾವಿದರ ಕೊಡುಗೆಗಳನ್ನು ಸ್ಮರಿಸುತ್ತಾ, ವಿದ್ಯಾರ್ಥಿಗಳು ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್ ಮಾತನಾಡಿ, ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಕ್ರಿಯಾಶೀಲ ವ್ಯಕ್ತಿತ್ವ ರೂಪುಗೊಳ್ಳುವುದು. ನಾಟಕ ರಂಜನೆಯ ಜತೆಗೆ ನೈತಿಕತೆ, ಮಾನವೀಯ ಮೌಲ್ಯಗಳ ಉದ್ದೀಪನ ಮಾಡುವುದು ಎಂದರು. ವಿದ್ಯಾರ್ಥಿಗಳು ಅಭ್ಯಾಸದ ಜತೆ ಲಲಿತ ಕಲೆಗಳ ಕಲಿಕೆಗೂ ಆಸಕ್ತಿ ವಹಿಸಲು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಹುಗಲೂರು ಗ್ರಾಮದ ರಂಗ ಒಕ್ಕಲು ಸಂಸ್ಥೆಯ ನಟ, ನಿರ್ದೇಶಕ ಅಜಯ್ ಚ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.

ಪ್ರಾಚಾರ್ಯ ಎಂ. ವಿಜಯಕುಮಾರ್, ಪತ್ರಕರ್ತ ಅಯ್ಯನಗೌಡ, ತಾಲೂಕು ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿದರು. ಎಂ. ಭೀಮಪ್ಪ ಸ್ವಾಗತಿಸಿದರು. ಡಾ. ಸತೀಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಪವಾಡಶೆಟ್ರು ವಂದಿಸಿದರು. ಉಪನ್ಯಾಸಕ ಗಿರಿಯಪ್ಪ ಜೋಗನ್ನವರ ಕಾರ್ಯಕ್ರಮ ನಿರ್ವಹಿಸಿದರು.