ಹಾನಗಲ್ಲ ತಾಲೂಕಿನ ರಂಗಗ್ರಾಮ ಶೇಷಗಿರಿಯಲ್ಲಿ ನೀನಾಸಂ ಎರಡು ದಿನಗಳ ನಾಟಕೋತ್ಸವದ ಉದ್ಘಾಟಿಸಲಾಯಿತು. ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳಾ ಜೈನ, ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಅವರನ್ನು ಗೌರವಿಸಲಾಯಿತು.

ಹಾನಗಲ್ಲ: ಮಕ್ಕಳು ಯುವಜನತೆಗೆ ಪ್ರೇರಣೆಯಾಗುವ ರಂಗಭೂಮಿಯಿಂದ ದೇಶದ ಹಿತಾಸಕ್ತಿಗೆ ಶಕ್ತಿ ತುಂಬಲು ಸಾಧ್ಯವಿದ್ದು, ರಂಗಕಲೆಯನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಅಗತ್ಯ ಈಗಿನದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.

ತಾಲೂಕಿನ ರಂಗಗ್ರಾಮ ಶೇಷಗಿರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶೇಷಗಿರಿ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ನಡೆದ ನೀನಾಸಂ ಎರಡು ದಿನಗಳ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲೆಗೆ ಸದಾ ಕಾಲಕ್ಕೂ ಬೆಲೆ ಇದ್ದೇ ಇದೆ. ಕಲೆ ಕೇವಲ ಮನರಂಜನೆಗೆ ಸೀಮಿತವಲ್ಲ. ಎಲ್ಲ ಕಾಲಕ್ಕೂ ಸಲ್ಲುವ ಸಮಾಜಮುಖಿ ಚಿಂತನೆಗಳನ್ನು ರಂಗದ ಮೂಲಕ ಅಭಿವ್ಯಕ್ತಿಸುವ ನಾಟಕ ಕಲೆ, ಅದು ನಮ್ಮ ಸಾಂಸ್ಕೃತಿಕ ಸಂಪತ್ತು. ರಂಗ ಕಲೆಗೆ ಎಲ್ಲರ ಮುಕ್ತ ಸಹಕಾರ ಬೇಕು. ಇಂದಿನ ಮನರಂಜನಾ ಮಾಧ್ಯಮಗಳ ಭರಾಟೆಯಲ್ಲಿ ರಂಗ ಕಲೆ ಮಂಕಾಗುವುದು ಬೇಡ. ಶೇಷಗಿರಿಯಲ್ಲಿ ಕಲಾವಿದರು ಹೊಸ ಅವಿಷ್ಕಾರವನ್ನೇ ಮಾಡಿ ರಂಗಕಲೆಯ ಮೂಲಕ ನಾಡಿಗೇ ಮಾದರಿಯಾಗಿರುವುದು ಇಲ್ಲಿನ ಹೆಗ್ಗಳಿಕೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ತಿಳವಳ್ಳಿಯ ಸಾಯಿ ಸೇವಾ ಸಂಸ್ಥೆ ಅಧ್ಯಕ್ಷ ಬಿ.ವಿ. ಬಿರಾದಾರ, ರಂಗಸ್ಥಳ ಒಂದು ಪವಿತ್ರ ಸ್ಥಾನ. ಬದುಕಿನ ಸತ್ಯ ಸಂಗತಿಗಳನ್ನು ಬಿತ್ತರಿಸುವ ಕಲಾ ಮಾಧ್ಯಮ, ಮನರಂಜನೆಯನ್ನೂ ಒಳಗೊಂಡು ಸಮಾಜವನ್ನು ತಿದ್ದುವ ಶುದ್ಧ ಕಲೆ. ಇಲ್ಲಿನ ರಂಗ ಪ್ರಯೋಗಗಳು ಹಲವರ ಜೀವನವನ್ನೇ ಬದಲಿಸಿವೆ. ಅತ್ಯಂತ ಶ್ರದ್ಧೆಯಿಂದ ಕಲಾವಿದರಾಗಿ ರಂಗ ಪ್ರವೇಶಿಸುವ ಸಾಧಕರು ನಮಗೆ ಆದರ್ಶವಾಗಬೇಕು. ಸಿ.ಎಂ. ಉದಾಸಿ ಅವರ ದೊಡ್ಡ ಕೊಡುಗೆಯಿಂದಾಗಿ ಶೇಷಗಿರಿ ರಂಗಭೂಮಿ ಎತ್ತರಕ್ಕೆ ಬೆಳೆದಿದೆ. ಶೇಷಗಿರಿ ಈ ಗಜಾನನ ಯುವಕ ಮಂಡಳದ ರಂಗ ಸೇವೆಗೆ ಸಹಕಾರಿಯಾಗಲು ತಮ್ಮ ನಿವೃತ್ತಿ ವೇತನದಲ್ಲಿ ಒಂದು ಲಕ್ಷ ದೇಣಿಗೆ ನೀಡುತ್ತಿರುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳಾ ಜೈನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಆರ್.ವಿ. ಚಿನ್ನೀಕಟ್ಟಿ ಅವರನ್ನು ಗೌರವಿಸಲಾಯಿತು. ನಾಗರಾಜ ಅಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಂದ್ರು ಉಡುಪಿ, ನಿರ್ದೇಶಕ ಎಂ. ಗಣೇಶ, ರಂಗ ಕಲಾವಿದೆ ಶಶಿಕಲಾ ಅಕ್ಕಿ ಪಾಲ್ಗೊಂಡಿದ್ದರು.

ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪುರ, ವಿಶ್ವನಾಥ ಬೋಂದಾಡೆ, ಎಸ್.ವಿ. ಹೊಸಮನಿ, ಮಂಜುನಾಥ ವಡ್ಡರ, ರಾಜೇಂದ್ರ ತೊಂಡೂರ, ಸಂಗೀತ ಕಲಾವಿದ ನರಸಿಂಹ ಕೋಮಾರ, ಸಿ. ಮಂಜುನಾಥ, ಷಣ್ಮುಖಪ್ಪ ಮುಚ್ಚಂಡಿ ಪಾಲ್ಗೊಂಡಿದ್ದರು.

ಪ್ರತೀಕ್ಷಾ ಕೋಮಾರ ಪ್ರಾರ್ಥನೆ ಹಾಡಿದರು. ನಿರ್ದೇಶಕ ಸಂತೋಷ ಸಂತೊಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಧಾರೇಶ್ವರ ಕಾರ್ಯಕ್ರಮ ನಿರೂಪಿಸಿದರು. ಜಮೀರ ಪಠಾಣ ವಂದಿಸಿದರು.