ಸಮಾಜದ ಅಂಕು-ಡೊಂಕು ತಿದ್ದುವ ರಂಗಭೂಮಿ

| Published : Jul 06 2025, 01:49 AM IST

ಸಾರಾಂಶ

ಕನ್ನಡ ರಂಗಭೂಮಿಗೆ ಶತಮಾನಗಳ ಇತಿಹಾಸವಿದೆ. ನಾಟಕದ ಉದ್ದೇಶ ಕೇವಲ ಮನರಂಜನೆ ಮಾತ್ರವಲ್ಲ. ನಮ್ಮ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಧಾರವಾಡ: ರಂಗಭೂಮಿ ಒಂದು ಜೀವಂತ ಕಲೆ, ಸಮಾಜದ ಅಂಕು-ಡೊಂಕು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಅದಕ್ಕಿದೆ ಎಂದು ರಂಗಕರ್ಮಿ ಸಿದ್ದರಾಮ ಹಿಪ್ಪರಗಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಏರ್ಪಡಿಸಿದ್ದ ನಿರ್ಮಲಾ ಶಶಿಧರ ಪಾಟೀಲ ದತ್ತಿಯಲ್ಲಿ ಧಾರವಾಡದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಮಹಿಳೆಯರು ವಿಷಯ ಕುರಿತು ಮಾತನಾಡಿದರು.

ನಾಟಕ ಒಂದು ರೀತಿ ಸಮುದ್ರವಿದ್ದಂತೆ. ಕಲಾವಿದರ ಧ್ವನಿ, ಮೈಕಟ್ಟು ಹಾವಭಾವ ಮುಖ್ಯ. ನವರಸಗಳಿಂದ ತುಂಬಿದ ನಾಟಕಗಳು ಮಾತ್ರ ಪ್ರೇಕ್ಷಕರನ್ನು ರಂಜಿಸುತ್ತವೆ. ಕನ್ನಡ ರಂಗಭೂಮಿಗೆ ಶತಮಾನಗಳ ಇತಿಹಾಸವಿದೆ. ನಾಟಕದ ಉದ್ದೇಶ ಕೇವಲ ಮನರಂಜನೆ ಮಾತ್ರವಲ್ಲ. ನಮ್ಮ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಧಾರವಾಡದ ರಂಗಭೂಮಿಯ ಖ್ಯಾತ ಕಲಾವಿದೆಯರಾದ ಜುಬೇದಾಬಾಯಿ ಸವಣೂರ, ವೀಣಾ, ಸರಸ್ವತಿ ಬೋಸಲೆ, ರಜನಿ ಗರುಡ, ಶೃತಿ ಹುರಳಿಕೊಪ್ಪ, ವಿಷಯಾ ಜೇವೂರ, ರಾಜೇಶ್ವರಿ ಸುಳ್ಯ, ಪದ್ಮಾ ಕೊಡಗು, ಆರತಿ ದೇವಶಿಖಾಮಣಿಯಂತಹ ನೂರಾರು ಕಲಾವಿದೆಯರು ಧಾರವಾಡದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಆಧುನಿಕ ರಂಗ ಶಿಕ್ಷಣ ಪಡೆದ ಪ್ರಥಮ ಮಹಿಳೆ ವೀಣಾ ಶರ್ಮರು. ಇವರು ಒಬ್ಬ ಶ್ರೇಷ್ಠ ಅಭಿನೇತ್ರಿ. ಅನೇಕ ರಂಗ ಕಲಾವಿದೆಯರು ತಮ್ಮ ಅಮೋಘ ಅಭಿನಯದಿಂದ ಗುಬ್ಬಿ ವೀರಣ್ಣ ಪ್ರಶಸ್ತಿ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆಧುನಿಕ ರಂಗಭೂಮಿಗೆ ತಂತ್ರಜ್ಞಾನ ಅಳವಡಿಸುವುದು ಅನಿವಾರ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಜಿಲ್ಲೆಯಲ್ಲಿ ರಂಗಭೂಮಿ ಜೀವಂತವಿಟ್ಟ ಕಲಾವಿದರ ದೊಡ್ಡ ಪರಂಪರೆಯೇ ಇದೆ ಎಂದರು.

ದಿ.ನಿರ್ಮಲಾ ಶಶಿಧರ ಪಾಟೀಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ಆರಂಭದಲ್ಲಿ ನಂದಿಕೋಲಮಠ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.