ಸಾರಾಂಶ
ಭದ್ರಾವತಿ ನಗರದ ಹೊಸಮನೆ ಓಎಸ್‌ಎಂ ರಸ್ತೆ ಅಂಗಡಿಯೊಂದರ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಹೊಸಮನೆ ಓಎಸ್‌ಎಂ ರಸ್ತೆ ಅಂಗಡಿಯೊಂದರ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತರೀಕೆರೆ ರಸ್ತೆ ಯಕಿನ್ಸಾ ಕಾಲೋನಿ ನಿವಾಸಿಗಳಾದ ಸೈಯದ್ ಹಸೇನ್ ಅಲಿಯಾಸ್ ಜಂಗ್ಲಿ(೧೯) ಮತ್ತು ಸೈಯದ್ ಇರ್ಫಾನ್ ಅಲಿಯಾಸ್ ಕಾಲು(೨೧)ರನ್ನು ಬಂಧಿಸಲಾಗಿದೆ. ಕಳೆದ ಜೂ.೧೭ರಂದು ರಾತ್ರಿ ಆಯುಧ ಬಳಸಿ ಪೊಲೀಸ್ ಠಾಣಾ ವ್ಯಾಪ್ತಿ ಓಎಸ್‌ಎಂ ರಸ್ತೆಯ ಶ್ರೀ ಮಂಜುನಾಥ ಆಟೋ ಸ್ಪೇರ್ಸ್ ಅಂಗಡಿ ಬಾಗಿಲು ಮುರಿದು ಹಣ ಕಳವು ಮಾಡಲಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ ಮತ್ತು ನಗರ ವೃತ್ತ ನಿರೀಕ್ಷಕ ಶ್ರೀ ಶೈಲಕುಮಾರ್ ಮೇಲ್ವಿಚಾರಣೆಯಲ್ಲಿ ಠಾಣಾ ಉಪ ನಿರೀಕ್ಷಕ ಎಚ್.ಶರಣಪ್ಪ ಮತ್ತು ಸಿಬ್ಬಂದಿ ಎಚ್.ಸಿ ಹಾಲಪ್ಪ, ನಾರಾಯಣ ಸ್ವಾಮಿ, ಮೌನೇಶ್ ಶೀಕಲ್, ಎಸ್.ಚಿಕ್ಕಪ್ಪ ಮತ್ತು ಪ್ರವೀಣ್‌ರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು.ತನಿಖಾ ತಂಡ ಜು.೮ರಂದು ಸೈಯದ್ ಹಸೇನ್ ಅಲಿಯಾಸ್ ಜಂಗ್ಲಿ ಮತ್ತು ಸೈಯದ್ ಇರ್ಫಾನ್ ಅಲಿಯಾಸ್ ಕಾಲುರವರನ್ನು ಬಂಧಿಸಿ ಕಳವು ಮಾಡಲಾಗಿದ್ದ ರು.೪೦,೦೦೦ ನಗದು ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದ ಉತ್ತಮವಾದ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪ್ರಶಂಸಿಸಿ ಅಭಿನಂದಿಸಿದ್ದಾರೆ.