ಬಂಧಿತರಿಂದ, 6.50 ಲಕ್ಷ. ಮೌಲ್ಯದ 3 ಬೊಲೆರೋ ಪಿಕ್ ಅಪ್ ವಾಹನ, 60 ಸಾವಿರ ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ಮೌಲ್ಯದ 2 ಹಸುಗಳು, 15 ಸಾವಿರ ನಗದು ಸೇರಿದಂತೆ ಒಟ್ಟು 8.95 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಾಹನ ಹಾಗೂ ಜಾನುವಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಡಿವೈಎಸ್ಪಿ, ಅಪರಾಧ ಪತ್ತೆದಳ ಹಾಗೂ ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಆನೇಕಲ್ಲು ಮೂಲದ ಫೈರೋಜ ಪಾಷ (40), ಸಾದಿಕ್ ಪಾಷ (30) ಮತ್ತು ಚಿಂತಾಮಣಿಯ ಸಬೀರ್ (35) ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಜೂ. 24 ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಉಮಾವತಿ ಹಾಗೂ ಕೊಳ್ಳೇಗಾಲ ಉಪವಿಭಾಗ ಡಿವೈ ಎಸ್ಪಿ ಅಪರಾಧ ಪತ್ತೆ ದಳದ ಪೊಲೀಸರು ಗಸ್ತಿನಲ್ಲಿದ್ದ ವೇಳೆ ತಾಲೂಕಿನ ದಾಸನಪುರ ರಸ್ತೆಯಲ್ಲಿ ಅನುಮಾನಸ್ಪದವಾಗಿ 1 ಬೊಲೆರೋ ವಾಹನ, ಮತ್ತೊಂದು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು, ಈ ವೇಳೆ ಮೂವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಸರಿಯಾಗಿ ಉತ್ತರ ನೀಡದ ಹಿನ್ನೆಲೆ ಅನುಮಾನಗೊಂಡ ಪೊಲೀಸರು, ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಅವರು ವಿವಿಧೆಡೆ ಕಳ್ಳತನ ಹಾಗೂ ಜಾನುವಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ವಿವರಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದ ವೇಳೆ ಈ ಮೂವರು ವಿವಿಧೆಡೆ ಕಳ್ಳತನ ಮಾಡಿದ್ದು, ಈ ಪೈಕಿ ಕೊಳ್ಳೇಗಾಲ ಉಪವಿಭಾಗದ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ, ಈ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ, 6.50 ಲಕ್ಷ. ಮೌಲ್ಯದ 3 ಬೊಲೆರೋ ಪಿಕ್ ಅಪ್ ವಾಹನ, 60 ಸಾವಿರ ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ಮೌಲ್ಯದ 2 ಹಸುಗಳು, 15 ಸಾವಿರ ನಗದು ಸೇರಿದಂತೆ ಒಟ್ಟು 8.95 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಪದ್ಮಿನಿ ಸಾಹು, ಅಪರ ಪೊಲೀಸ್ ವರಿಷ್ಠಾ ಧಿಕಾರಿ ಉದ್ದೇಶ್, ಡಿವೈಎಸ್ಪಿ ಧಮೇಂದ್ರ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶಿವಮಾದಯ್ಯ, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಉಮಾವತಿ, ರಾಮಪುರ ಪೊಲೀಸ್ ಠಾಣೆಯ ಪಿಎಸ್ಐ ರಾಧ, ಸಿಬ್ಬಂದಿ ಅಮರೇಶ್ ರೆಡ್ಡಿ, ಸವಿರಾಜು, ಬಸವರಾಜು, ಡಿವೈಎಸ್ಪಿ ಅಪರಾಧ ಪತ್ತೆದಳದ ಎಎಸ್ ಐ ತಕ್ಕಿವುಲ್ಲಾ, ಹೆಡ್ ಕಾನ್ಸ್ ಟೇಬಲ್ ಗಳಾದ ವೆಂಕಟೇಶ್, ಕಿಶೋರ್, ಕಾನ್ಸ್ ಟೇಬಲ್ ಗಳಾದ ಬಿಳಿಗೌಡ, ಶಿವಕುಮಾರ್ ಮತ್ತಿತರಿದ್ದರು.