ಕಳ್ಳತನ, ಸುಲಿಗೆ: ಇಬ್ಬರು ಆರೋಪಿಗಳ ಬಂಧನ

| Published : Oct 07 2024, 01:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹೊರ್ತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಏಳು ಹಾಗೂ ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿಯ ಒಂದು ಪ್ರಕರಣ ಸೇರಿ ಒಟ್ಟು ಎಂಟು ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಬೇಧಿಸಿದ್ದು, ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಸೆರೆಸಿಕ್ಕ ಆರೋಪಿಗಳಿಂದ 184 ಗ್ರಾಂ ಚಿನ್ನ ಮತ್ತು 80 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಇನ್ನುಳಿದ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಹೊರ್ತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಏಳು ಹಾಗೂ ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿಯ ಒಂದು ಪ್ರಕರಣ ಸೇರಿ ಒಟ್ಟು ಎಂಟು ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಬೇಧಿಸಿದ್ದು, ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಸೆರೆಸಿಕ್ಕ ಆರೋಪಿಗಳಿಂದ 184 ಗ್ರಾಂ ಚಿನ್ನ ಮತ್ತು 80 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಇನ್ನುಳಿದ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಒಂದು ವರ್ಷದಲ್ಲಿ ಇಂಡಿ ತಾಲೂಕಿನ ಹೊರ್ತಿ, ಅಗಸನಾಳ, ಹಳಗುಣಕಿ, ಇಂಚಗೇರಿ ಗ್ರಾಮಗಳಲ್ಲಿ ನಡೆದ 7 ಮನೆ ಕಳ್ಳತನ ಹಾಗೂ 1 ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸ್ ತಂಡವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಪಾಂಡುಜರಿ ತಾಂಡಾದ ವಿಕಿ ಅಲಿಯಾಸ್ ವಿಕ್ಯಾ ಮತ್ತು ಸಂಜು ಪವಾರ ಎಂಬುವರನ್ನು ಬಂಧಿಸಿದೆ.

ಈ ಇಬ್ಬರು ಖದೀಮರು ತಮ್ಮ ಐವರು ಸಹಚರರೊಂದಿಗೆ ಸೇರಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿದ್ದರು. ಕಳ್ಳತನ ಮತ್ತು ಸುಲಿಗೆ ಕೃತ್ಯ ನಡೆಸುತ್ತಿದ್ದರು. ಈ ಬಗ್ಗೆ ಸಂಶಯದ ಮೇಲೆ ಜತ್ತ ತಾಲೂಕಿನ ಸಂಖ ಹತ್ತಿರ ಸೆ.17ರಂದು ಮೊದಲ ಆರೋಪಿಯನ್ನು ಹಾಗೂ ಎರಡನೇ ಆರೋಪಿಯನ್ನು ಸೋಲಾಪೂರದ ಸೋರೆಗಾಂವ ಪೊಲೀಸ್ ಚೆಕ್ ಪೋಸ್ಟ್ ಬಳಿ ಸೆ. 22ರಂದು ವಶಕ್ಕೆ ಪಡೆಯಲಾಗಿತ್ತು. ಬಳಿಕ ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾಗಿ ತಿಳಿಸಿದರು.

ಅಂತಾರಾಜ್ಯ ಕಳ್ಳರಾಗಿದ್ದ ಇವರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿತ್ತು. ನೆರೆ ರಾಜ್ಯದ ಪೊಲೀಸರ ನೆರವು ಪಡೆದು ಕದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣವನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 8 ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿತರಿಂದ ₹ 9.55 ಲಕ್ಷ ಮೌಲ್ಯದ 184.57 ಗ್ರಾಂ ತೂಕದ ಬಂಗಾರ ಮತ್ತು 80 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ₹ 5 ಲಕ್ಷ ಮೌಲ್ಯದ ಕಾರನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 50 ಗ್ರಾಂ ಚಿನ್ನಾಭರಣವನ್ನು ಖದೀಮವರು ಮಹಾರಾಷ್ಟ್ರದ ಬ್ಯಾಂಕ್‌ವೊಂದರಲ್ಲಿ ಠೇವಣಿ ಇರಿಸಿದ್ದರು. ಇದನ್ನು ಜಪ್ತಿ ಮಾಡುವಲ್ಲಿ ಬ್ಯಾಂಕ್ ಅಧಿಕಾರಿಗಳು ಸಹ ಸಹಕಾರ ನೀಡಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ಎಸ್ಪಿ ಮಾಹಿತಿ ನೀಡಿದರು.