ಅಂತರ ಜಿಲ್ಲಾ ಮದ್ಯದಂಗಡಿಗಳ ಕಳವು: ಮೂವರ ಬಂಧನ

| Published : Jun 27 2024, 01:01 AM IST

ಸಾರಾಂಶ

ಚಿಕ್ಕಮಗಳೂರು, ಮದ್ಯದ ಅಂಗಡಿ ಹಾಗೂ ಬಾರ್‌ಗಳಲ್ಲಿ ಕಳವು ಮಾಡುತ್ತಿದ್ದ ಮೂವರನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮದ್ಯದ ಅಂಗಡಿ ಹಾಗೂ ಬಾರ್‌ಗಳಲ್ಲಿ ಕಳವು ಮಾಡುತ್ತಿದ್ದ ಮೂವರನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಳೇನರಸೀಪುರ ತಾಲೂಕಿನ ಕಬ್ಬಿನಹಳ್ಳಿ ಗ್ರಾಮದ ಕೆ.ಜಗದೀಶ್‌, ಬೆಂಗಳೂರಿನ ನಾಗಸಂದ್ರದ ಎಸ್‌. ರಘುಕುಮಾರ್‌, ಕಡೂರು ತಾಲೂಕಿನ ಹೋರಿ ತಿಮ್ಮನಹಳ್ಳಿ ಎಚ್‌.ಈ. ದರ್ಶನ್‌ ಬಂಧಿತ ಆರೋಪಿಗಳು.

ತಾಲೂಕಿನ ಮರ್ಲೆ ಗ್ರಾಮದ ಎಂ.ಎಸ್.ಐ.ಎಲ್ ಮದ್ಯದಂಗಡಿ ರೋಲಿಂಗ್ ಶೆಟ್ಟರ್‌ನ ಬೀಗ ಮುರಿದು ಒಳಪ್ರವೇಶಿಸಿ 7,41,160 ರು. ನಗದು ಹಾಗು ಸಿಸಿಟಿವಿ ಡಿವಿಆರ್ ನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದ ಪತ್ತೆಗಾಗಿ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಈ ತಂಡ ಮೂವರು ಆರೋಪಿಗಳನ್ನು ವಶಪಡಿಸಿಕೊಂಡು ಅವರ ಬಳಿ ಇದ್ದ 52,200 ರು. ನಗದು, 10 ಬಿಯರ್ ಬಾಟಲಿಗಳು, 60 ಎಂ.ಎಲ್ ನ 20 ವಿಸ್ಕಿ ಬಾಟೆಲ್ ಗಳು, 180 ಎಂ.ಎಲ್ ನ 5 ವಿಸ್ಕಿ ಬಾಟೆಲ್ ಗಳು ಮತ್ತು ಕೃತ್ಯವೆಸಗಲು ಬಳಸಿದ್ದ ಕಾರು ಸೇರಿದಂತೆ ಒಟ್ಟು 3,61,430 ರು.ಗಳ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ ಒಟ್ಟು 8 ಪ್ರಕರಣಗಳಲ್ಲಿ ಕೃತ್ಯ ಎಸಗಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾದ ಆರೋಪಿ ಜಗದೀಶ್‌, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಹಲವು ದೇವಾಲಯಗಳಲ್ಲಿ ಕಳವು ಹಾಗೂ ಕುರಿ ಕಳವು ಪ್ರಕರಣಗಳಲ್ಲೂ ಸಹ ಭಾಗಿಯಾಗಿದ್ದಾರೆ. ಇನ್ನೋರ್ವ ಆರೋಪಿ ಎಸ್‌. ರಘುಕುಮಾರ್‌ ತಾನು ಮಾನವ ಹಕ್ಕು ಆಯೋಗದ ಸದಸ್ಯ ಎಂದು ಹೇಳಿಕೊಂಡಿರುವುದು ತನಿಖೆ ವೇಳೆಯಲ್ಲಿ ತಿಳಿದು ಬಂದಿದೆ.

ಆರೋಪಿಗಳನ್ನು ಪತ್ತೆ ಹಚ್ಚಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾ ರಕ್ಷಣಾಧಿಕಾರಿಗಳು ಶ್ಲಾಘಿಸಿದ್ದಾರೆ.

26 ಕೆಸಿಕೆಎಂ 3

ಬಾರ್ ಹಾಗೂ ಮದ್ಯದಂಗಡಿಗಳಲ್ಲಿ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ಅವರಿಂದ ವಶಪಡಿಸಿಕೊಂಡ ಮದ್ಯ ಹಾಗೂ ನಗದಿನೊಂದಿಗೆ ಚಿಕ್ಕಮಗಳೂರು ಗ್ರಾಮಾಂತರ ಸಿಪಿಐ ಸಚಿನ್‌ಕುಮಾರ್‌ ಹಾಗೂ ಸಿಬ್ಬಂದಿ.