ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನ ತಡಕಲ್ ಗ್ರಾಮದಲ್ಲಿ ಜು.15ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ 51,600 ರುಪಾಯಿ ಮೌಲ್ಯದ ಕಳವಾದ ಆಭರಣ ಮತ್ತು ನಗದನ್ನು ಅಳಂದ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದಿದ್ದಾರೆ.ತಡಕಲ್ ಗ್ರಾಮ ನಿವಾಸಿ ಫಿರ್ಯಾದಿ ಸುನೀತಾ ಮಲ್ಲಿಕಾರ್ಜುನ ಜಮಾದಾರ ಅವರು ತಮ್ಮ ಮನೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ನಡುವೆ ಅಪರಿಚಿತ ಕಳ್ಳರು ನುಗ್ಗಿ ಬಂಗಾರ-ಬೆಳ್ಳಿ ಆಭರಣಗಳು, ನಗದು ಹಾಗೂ ಅಡುಗೆ ಸಾಮಾನುಗಳನ್ನು ಕಳವು ಮಾಡಿದ ಬಗ್ಗೆ ಅಳಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಈ ದೂರಿನ ಆಧಾರವಾಗಿ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಹಾಗೂ ಆಳಂದ ಉಪವಿಭಾಗದ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ, ಅಳಂದ ಠಾಣೆ ಪಿಐ ಶರಣಬಸಪ್ಪ ಕೊಡ್ಲಾ ಮತ್ತು ಪಿಎಸ್‍ಐ ಸಂಜೀವ್ ರೆಡ್ಡಿ ನೇತೃತ್ವ ತಂಡ ತನಿಖೆ ನಡೆಸಿತು.ಜು.17ರಂದು, ತಡಕಲ್ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಪಟ್ಟಣದ ವಡ್ಡರಗಲ್ಲಿಯ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ, ಈ ಕಾರ್ಯಾಚರಣೆಯಲ್ಲಿ ಎಸ್‍ಐ ಪ್ರಭಾವತಿ, ಎಚ್.ಸಿ.ಮಹೆಬೂಬ್ ಶೇಖ ಸಿದ್ದರಾಮ, ಸಚಿನ್, ಸಿದ್ದರಾಮ, ಜಾಕೀರ್ ಮತ್ತು ಮೌಲಾಲಿ ಗುಳ್ಳಳ್ಳಿ ಭಾಗವಹಿಸಿದ್ದರು.
ವಶಪಡಿಸಿಕೊಂಡ ಸಾಮಗ್ರಿ:4 ಗ್ರಾಂ ಬಂಗಾರದ 02 ಮಕ್ಕಳ ಉಂಗುರಗಳು – ಅಂದಾಜು 40,000 ರುಪಾಯಿ ಹಾಗೂ 30 ಗ್ರಾಂ ಬೆಳ್ಳಿಯ ಮಕ್ಕಳ ಕಾಲು ಚೈನ್‌ಗಳು 3,600 ರುಪಾಯಿ ನಗದು 3,800 ರುಪಾಯಿ 2 ತಾಮ್ರದ ದೀಪದ ಸಮಾಯಿಗಳ ಬೆಲೆ 2,000, ಕುರುಡಗಿ ಹಾಕುವ ಮಣಿ 600, 2 ಜರ್ಮನ್ ಡಬ್ಬಗಳು ಹಾಗೂ 1 ಜರ್ಮನ್ ಹಂಚು 800 ರುಪಾಯಿ 5 ಸ್ಟೀಲ್ ತಟ್ಟೆಗಳು 800 ಹೀಗೆ ಒಟ್ಟು ಮೌಲ್ಯ 51,600 ರುಪಾಯಿ ಸಾಮಗ್ರಿ ಜಪ್ತಿಕೈಗೊಂಡಿದ್ದಾರೆ.
ಆರೋಪಿತ ಮಹಿಳೆಯರು ತನಿಖೆ ವೇಳೆ ತಡಕಲ್ ಗ್ರಾಮದಲ್ಲಿ ಕಳ್ಳತನ ಮಾಡಿದ ಬಗ್ಗೆ ಸ್ವೀಕರಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.