ಕಾಪು ತಾಲೂಕಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ಅವರ ಮನೆಯಲ್ಲಿ ಗುರುವಾರ ರಾತ್ರಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವಾಗಿದೆ.
ಕಾಪು: ಕಾಪು ತಾಲೂಕಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ಅವರ ಮನೆಯಲ್ಲಿ ಗುರುವಾರ ರಾತ್ರಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವಾಗಿದೆ.
ಹಿರಿಯ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರು ಕುಟುಂಬ ಸಹಿತ ಮುಂಬೈಗೆ ಕೌಟುಂಬಿಕ ಕಾರ್ಯಕ್ರಮಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳತನ ನಡೆದಿದೆ. ಮನೆಗೆ ಕಾವಲುಗಾರರನ್ನು ನಿಯೋಜಿಸಲಾಗಿದ್ದು, ರಾತ್ರಿ ಆತ ಮನೆಯ ಮೇಲ್ಮಡಿಯಲ್ಲಿ ಮಲಗಿ ಗಾಢ ನಿದ್ದೆಯಲ್ಲಿದ್ದಾಗ, ಕಳ್ಳರು ಆತನಿಗೆ ಎಚ್ಚರವಾಗದಷ್ಟು ನಾಚೂಕಾಗಿ ಮನೆ ಬಾಗಿಲನ್ನು ನಕಲಿ ಕೀಲಿಕೈಯಿಂದ ತೆರೆದು ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ. ಕಾವಲುಗಾರನನ್ನು ನೇಮಿಸಿದ್ದರಿಂದ ಲಕ್ಷಾಂತರ ರು. ಮೌಲ್ಯದ ಸೊತ್ತುಗಳು ಒಳಗಿದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಕಳ್ಳತನ ಮಾಡಿ ಹೋಗುವಾಗ ಕಾವಲುಗಾರನ ಬಳಿ ಇದ್ದ ಮೊಬೈಲ್‌ನ್ನು ಒಯ್ದು ಸ್ವಲ್ಪ ದೂರದಲ್ಲಿರುವ ಮಸೀದಿ ಬಳಿ ಎಸೆದು ಹೋಗಿದ್ದಾರೆ.ಇದಕ್ಕೆ ಮೊದಲು ಕಳ್ಳರು ಚಾಣಾಕ್ಷತನದಿಂದ ಮನೆಯ ಸಿಸಿ ಕ್ಯಾಮೆರಾದ ದಿಕ್ಕನ್ನು ಬದಲಿಸಿ, ಮನೆಯ ಒಳಗಿದ್ದ ಡಿವಿಆರ್ ನ್ನು ಕೂಡ ಹೊತ್ತೊಯ್ದಿದ್ದಾರೆ. ಆದ್ದರಿಂದ ಪೊಲೀಸರಿಗೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳೂ ಲಭ್ಯವಾಗಿಲ್ಲಶುಕ್ರವಾರ ಕಾವಲುಗಾರನಿಂದ ಮಾಹಿತಿ ಪಡೆದು ಪೊಲೀಸರು ನಾಯಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಪೊಲೀಸ್ ನಾಯಿ ಹೆದ್ದಾರಿಯಲ್ಲಿ ಸುಮಾರು 200 ಮೀಟರ್ ವರೆಗೆ ಹೋಗಿ ನಿಂತಿತು. ಅಲ್ಲಿಂದ ಕಳ್ಳರು ಎತ್ತ ಕಡೆ ಹೋಗಿದ್ದಾರೆ ಎಂಬುದು ಪತ್ತೆಯಾಗಿಲ್ಲ.ಮನೆ ಮಾಲೀಕ ದಿವಾಕರ ಶೆಟ್ಟಿ ಅವರಿಗೆ ವಿಷಯ ತಿಳಿಸಲಾಗಿದ್ದು, ಅವರು ಶುಕ್ರವಾರ ಮುಂಬೈಯಿಂದ ಹೊರಟಿದ್ದು, ಅವರು ಬಂದ ಮೇಲಷ್ಟೇ ಕಳ್ಳತನವಾದ ಸೊತ್ತುಗಳು ಮತ್ತು ಅವುಗಳ ಮೌಲ್ಯ ಪತ್ತೆಯಾಗಬೇಕಾಗಿದೆ.
