ಎಸ್‌ಬಿಐ ಎಟಿಎಂನಿಂದ ₹24 ಲಕ್ಷ ನಗದು ದೋಚಿ ಪರಾರಿ

| Published : Feb 08 2024, 01:31 AM IST

ಸಾರಾಂಶ

ಐಶಾರಾಮಿ ಕಾರಿನಲ್ಲಿ ಆಗಮಿಸಿದ ಕಳ್ಳರು ಗ್ಯಾಸ್‌ ಕಟರ್‌ ಮೂಲಕ ಶೆಟರ್‌ ಕೀಲಿ ಮುರಿದು ಎಟಿಎಮ್ ಒಡೆದು ದೋಚಿರುವುದು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹಳ್ಳಿಖೇಡ (ಬಿ) ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಟಿಎಂನಿಂದ 24 ಲಕ್ಷಕ್ಕೂ ಅಧಿಕ ನಗದು ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳರು ಐಶಾರಾಮಿ ಕಾರಿನಲ್ಲಿ ಆಗಮಿಸಿ ಗ್ಯಾಸ್‌ ಕಟರ್‌ ಮೂಲಕ ಶೆಟರ್‌ ಕೀಲಿ ಮುರಿದು ಎಟಿಎಮ್ ಒಡೆದು ದೋಚಿರುವುದು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಎಟಿಎಂ ಒಳ ಪ್ರವೇಶಿಸಿದ ಕಳ್ಳರು ಸಿಸಿ ಕ್ಯಾಮೆರಾಗಳಿಗೆ ಹಾನಿ ಪಡಿಸಿ ಗುರುತು ಪತ್ತೆಯಾಗದಂತೆ ಪ್ರಯತ್ನ ನಡೆಸಿದ್ದಾರೆ. ಆದರೂ ಆರಂಭದಲ್ಲಿ ನಡೆದ ಕಳ್ಳತನ ಪ್ರಕರಣಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಫೆ.3ರಂದು ಎಸ್‌ಬಿಐ ಎಟಿಎಂನಲ್ಲಿ 25.16 ಲಕ್ಷ ರು. ಜಮೆ ಮಾಡಲಾಗಿತ್ತು. ಇದರಲ್ಲಿ 59 ಸಾವಿರ ಮಾತ್ರ ಗ್ರಾಹಕರು ತೆಗೆದಿದ್ದು, ಇನ್ನುಳಿದ 24.57 ಲಕ್ಷ ರು.ಗಳನ್ನು ಎಟಿಎಂನಿಂದ ಕಳ್ಳತನವಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕರು ಮಂಗಳವಾರ ಸಂಜೆ ನೀಡಿದ ದೂರಿನಂತೆ ಹಳ್ಳಿಖೇಡ (ಬಿ) ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.