ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದಕ್ಕೆ ಆಕ್ರೋಶಗೊಂಡ ರೈತರು ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದಾರೆ.
ಕನಕಗಿರಿ: ಹೊಲ, ತೋಟಗಳಲ್ಲಿ ಬೆಳೆದ ಫಸಲನ್ನು ಕಳ್ಳತನ ಮಾಡುತ್ತಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರರು ವಿಶೇಷ ತಂಡ ರಚಿಸಲು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಹಲವು ದಿನಗಳಿಂದ ಕನಕಗಿರಿ, ಹನುಮನಾಳ, ಕನಕಾಪೂರ, ಕೆ.ಕಾಟಾಪೂರ, ನಿರ್ಲೂಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ರೈತರ ಹೊಲ,ತೋಟಗಳಿಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಮುಂದಾಗಿದ್ದಾರೆ. ಕಟಾವಿಗೆ ಬಂದ ತೊಗರಿ ಫಸಲು, ಬೈಕ್ ಹಿಂಬದಿ ಚಕ್ರ, ರಂಟೆ, ಕುಂಟೆ, ಮಡಿಕೆ, ನೊಗ, ಜಾನುವಾರು, ಕೋಳಿ, ಬೊರವೆಲ್ ಸಾಮಗ್ರಿಗಳು ಕಳ್ಳರ ಪಾಲಾಗಿವೆ.ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದಕ್ಕೆ ಆಕ್ರೋಶಗೊಂಡ ರೈತರು ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಆದರೆ, ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಮೌನ ವಹಿಸಿದೆ. ಅಲ್ಲದೇ ರೈತ ಸಂಘಟನೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಹಸೀಲ್ದಾರರು ಸ್ಥಳೀಯ ಠಾಣೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತಾಲೂಕು ಕೇಂದ್ರ ಸೇರಿದಂತೆ ಸುತ್ತಮುತ್ತಲಿ ಕೆಲ ಗ್ರಾಮಗಳಲ್ಲಿ ರೈತರ ಫಸಲು ಹಾಗೂ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ಸಾಮಗ್ರಿಗಳು ಕಳ್ಳತನವಾಗಿರುವ ಕುರಿತು ರೈತ ಸಂಘಟನೆ ಮನವಿ ಸಲ್ಲಿಸಿತ್ತು. ಕಳ್ಳರ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲು ಸ್ಥಳೀಯ ಠಾಣೆಗೆ ಪತ್ರ ಬರೆಯಲಾಗಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.ರೈತರು ಬೆಳೆದ ಫಸಲು ಹಾಗೂ ಕೃಷಿ ಸಾಮಗ್ರಿಗಳ ಕಳ್ಳತನದ ಬಗ್ಗೆ ತಹಸೀಲ್ದಾರರಿಂದ ಪತ್ರ ಬಂದಿದೆ. ತಂಡ ರಚಿಸಿ ಕಳ್ಳರನ್ನು ಬಂಧಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು
ಕನಕಗಿರಿ ಪಿಐ ಎಂ.ಡಿ. ಫೈಜುಲ್ಲಾ ಎಂದರು.