ತಡರಾತ್ರಿ ರೈತರ ಬೋರ್‌ವೆಲ್‌ ಪಂಪ್‌ಸೆಟ್‌ಗಳ ವಿದ್ಯುತ್ ವೈರ್‌ಗಳನ್ನು ಕಳ್ಳತನ ಮಾಡುತ್ತಿರುವ ಹಲವು ಘಟನೆಗಳು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ತಡರಾತ್ರಿ ರೈತರ ಬೋರ್‌ವೆಲ್‌ ಪಂಪ್‌ಸೆಟ್‌ಗಳ ವಿದ್ಯುತ್ ವೈರ್‌ಗಳನ್ನು ಕಳ್ಳತನ ಮಾಡುತ್ತಿರುವ ಹಲವು ಘಟನೆಗಳು ತಾಲೂಕಿನ ವ್ಯಾಪ್ತಿಯಲ್ಲಿ ಜರುಗುತ್ತಿದೆ.

ರಾತ್ರಿ ಹೊತ್ತು ರೈತರ ಪಂಪ್‌ಸೆಟ್‌ಗೆ ಅಳವಡಿಸಿರುವ ಕೇಬಲ್‌ಗಳನ್ನು ಬೋರ್‌ವೆಲ್‌ನಿಂದ ಎಳೆದುಕೊಂಡು ಕಳ್ಳತನ ಮಾಡಲಾಗುತ್ತಿದೆ. ಕಳ್ಳರು ತಂತಿ ಮಾರಾಟ ಮಾಡಿ ಹಣ ಪಡೆಯುತ್ತಾರೆ. ಇದರಿಂದ ರೈತ ವರ್ಗಕ್ಕೆ ಬರದ ನಡುವೆ ಇನ್ನಷ್ಟು ಹೊರೆ ಬೀಳುತ್ತಿದೆ.

ತಾಲೂಕಿನಾದ್ಯಂತ ಇದುವರೆಗೂ 20ಕ್ಕೂ ಹೆಚ್ಚು ರೈತರ ಕೇಬಲ್ ಕಳ್ಳತನ ಆಗಿರುವ ಮಾಹಿತಿ ಇದೆ. ಈ ಬಗ್ಗೆ ಹಿಂದೆ ರೈತ ಸಂಘದಿಂದ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿತ್ತು. ಆದರೆ ಕಳ್ಳತನ ನಿಂತಿಲ್ಲ. ಎರಡು ದಿನಗಳ ಹಿಂದೆ ದ್ಯಾಂಪೂರು ಗ್ರಾಮದಲ್ಲಿ ನಾಲ್ವರು ರೈತರ ಬೋರ್‌ವೆಲ್ ಹಾಗೂ ಬಾವಿಯ ಪಂಪ್‌ಸೆಟ್ ಕೇಬಲ್ ಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ಒಂದು ಮೀಟರ್ ಕೇಬಲ್‌ಗೆ ₹100 ಬೆಲೆ ಇದೆ. ಒಬ್ಬ ರೈತರ ಬೋರ್‌ವೆಲ್‌ನ 50ರಿಂದ 60 ಮೀಟರ್ ಕೇಬಲ್ ಕದಿಯುತ್ತಿದ್ದಾರೆ. ರೈತರಿಗೆ ಹೊಸ ಕೇಬಲ್‌ ತಂದು ಅಳವಡಿಸುವುದು ಅನಿವಾರ್ಯವಾಗಿದೆ.

ನಾನು ಹೊಲದಲ್ಲಿ 16 ಸಾವಿರ ಮೆಣಸಿನಕಾಯಿ ಅಗಿಗಳನ್ನು ಹಚ್ಚಿದ್ದೆ, ಅದಕ್ಕೆ ನೀರು ಹಾಯಿಸಬೇಕು ಎಂದು ತೋಟಕ್ಕೆ ಹೋದ್ರೆ ಪಂಪ್‌ಸೆಟ್‌ ಕೇಬಲ್‌ನ್ನು ಯಾರೋ ರಾತ್ರೋರಾತ್ರಿ ಕಟ್ ಮಾಡಿಕೊಂಡು ಹೋಗಿದ್ದಾರೆ ನೋಡ್ರೀ, ಇದರಿಂದ ಅಗಿಗಳಿಗೆ ನೀರು ಸಹ ಹಾಯಿಸಲು ಆಗದೆ, ಒಣಗಿ ಹೋಗಿವೆ. ಅಗಿಗಳಿಗೆ ₹20 ಸಾವಿರ ಖರ್ಚು ಮಾಡಿಕೊಂಡಿದ್ದೇವೆ. ಇದರಿಂದ ನಮ್ ಕಷ್ಟ ಹೇಳತೀರದಾಗಿದೆ ಅನ್ನುತ್ತಾರೆ ರೈತ ಪರಸಪ್ಪ ಪೊಳಾದ ಅವರು.

ಕಟ್ಟೆಚ್ಚರ ಆಗಬೇಕು: ತಡರಾತ್ರಿ ಕಳ್ಳರು ಬಂದು ನಮ್ಮ ಬೋರ್‌ವೆಲ್ ಹಾಗೂ ಬಾವಿಯ ಪಂಪ್‌ಸೆಟ್‌ಗೆ ಅಳವಡಿಸಿರುವ ಕೇಬಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ. ಕಳ್ಳರ ಪತ್ತೆ ಆಗಬೇಕು. ಅವರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಕಟ್ಟೆಚ್ಚರ ಆಗಬೇಕಿದೆ ಎಂದು ದ್ಯಾಂಪೂರು ಗ್ರಾಮದ ರೈತರಾದ ಪರಸಪ್ಪ ಪೊಳಾದ, ಮಲ್ಲಪ್ಪ ನೋಟಗಾರ ಹೇಳಿದರು.