ಸ್ಮಶಾನದಲ್ಲಿ ಹೂತ ಶವಗಳನ್ನು ಹೊರಗಡೆ ತೆಗೆದು ಅವುಗಳ ಬುರುಡೆ, ಎಲಬು ಹಾಗೂ ಇತರೆ ಭಾಗಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ಮಶಾನದಲ್ಲಿ ಹೂತ ಶವಗಳನ್ನು ಹೊರಗಡೆ ತೆಗೆದು ಅವುಗಳ ಬುರುಡೆ, ಎಲಬು ಹಾಗೂ ಇತರೆ ಭಾಗಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಸ್ಥಳೀಯ ವಾರ್ಡ್‌ ನಂ.13ರ ವ್ಯಾಪ್ತಿಯ ಮಾರುತಿ ನಗರದ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಹನುಮಯ್ಯ ತಳವಾರ, ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರಾಜು ಮತ್ತು ಅಫ್ಸರ್ ರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಸಮಯದಲ್ಲಿ ಹನುಮಯ್ಯ ತಳವಾರ ಹೂತ ಶವಗಳನ್ನು ಹೊರಗಡೆ ತೆಗೆದು ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಹಲವು ದಿನಗಳಿಂದ ಹೂತ ಶವಗಳ ಕಳ್ಳಸಾಗಾಟವು ಸಾಗಿರುವುದರ ಕುರಿತು ಗಮನಿಸಿದ ಸ್ಥಳೀಯರು ನೇತಾಜಿನಗರ ಠಾಣೆಗೆ ದೂರು ನೀಡಿದ್ದು, ಅದನ್ನಾಧರಿಸಿ ಪೊಲೀಸರು ರುದ್ರಭೂಮಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಮನುಷ್ಯನ ಬುರುಡೆ, ಎಲುಬು ಹಾಗೂ ದೇಹದ ಇತರೆ ಭಾಗಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದರಿಂದ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಳೆದ ಹಲವು ದಿನಗಳಿಂದ ಸ್ಮಶಾನದಲ್ಲಿ ಹೂತಿಟ್ಟ ಮನುಷ್ಯರ ಅಸ್ತಿಪಂಜರದ ಬುರುಡೆ, ಎಲಬು ಹಾಗೂ ಅದರ ಬಿಡಿ ಭಾಗಗಳನ್ನು ತೆಗೆದುಕೊಂಡು ಹೋಗುತ್ತಿರುವುದರ ಕುರಿತು ಸ್ಥಳೀಯ ನಿವಾಸಿಗಳು ನೀಡಿದ ದೂರನ್ನಾಧರಿಸಿ ಸ್ಥಳಕ್ಕೆ ಬಂದ ಪೊಲೀಸರು ನವೋದಯ ವೈದ್ಯಕೀಯ ಕಾಲೇಜಿನ ಇಬ್ಬರು ಸಿಕ್ಕಿಹಾಕಿಕೊಂಡಿದ್ದು, ಸ್ಮಶಾನ ಕಾಯುವ ವ್ಯಕ್ತಿಗೆ ಹಣ ನೀಡಿ ಅಸ್ತಿಪಂಜರ ಹಾಗೂ ಬಿಡಿ ಭಾಗಗಳನ್ನು ಪಡೆದು ಅದನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗೆ ಅನಧಿಕೃತವಾಗಿ, ಅಕ್ರಮವಾಗಿ ಅಸ್ತಿಪಂಜರಗಳ ಸಾಗಾಟ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.