ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಫ್ಟ್‌ವೇರ್ ಇಂಜಿನಿಯರೊಬ್ಬರ ಮನೆ ಕೆಲಸಕ್ಕೆ ಸೇರಿಕೊಂಡು ಮಾರನೇ ದಿನವೇ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮುಂಬೈ ಗ್ಯಾಂಗ್‌ನ ಇಬ್ಬರು ಖತರ್ನಾಕ್ ಕಳ್ಳಿಯರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ವನಿತಾ(38) ಮತ್ತು ಯಶೋಧಾ(40) ಬಂಧಿತರು. ಆರೋಪಿಗಳಿಂದ 127 ಗ್ರಾಂ ತೂಕದ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ಆರೋಪಿಗಳು ನ. 27ರಂದು ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿ ಎಸ್‌ಜೆಆರ್ ಪ್ಲಾಜಾ ಸಿಟಿ ಅಪಾರ್ಟ್‌ಮೆಂಟ್ ನಿವಾಸಿ ಶೇಖರ್ ಆನಂದ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸವಿತಾ ಎಂಬಾಕೆ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಶೇಖರ್ ಆನಂದ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಪತ್ನಿ ಹಾಗೂ ಮಕ್ಕಳೊಂದಿಗೆ ದೊಡ್ಡಕನ್ನಹಳ್ಳಿಯ ಎಸ್‌ಜೆಆರ್ ಪ್ಲಾಜಾ ಸಿಟಿಯ ಅಪಾರ್ಟ್‌ಮೆಂಟ್ ಪ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ. ನ. 26ರಂದು ವನಿತಾ ಮತ್ತು ಸವಿತಾ ಎಂಬುವವರು ಶೇಖರ್ ಆನಂದ್ ಮನೆಯ ಕೆಲಸಕ್ಕೆ ಸೇರಿದ್ದರು. ನ. 27ರಂದು ಕೆಲಸಕ್ಕೆ ಬಂದಿದ್ದ ಇಬ್ಬರು ಮನೆಯ ಡ್ರಾಯರ್‌ನಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಡಿ. 3ರಂದು ಶೇಖರ್ ಆನಂದ್ ಅವರ ಪತ್ನಿ ಡ್ರಾಯರ್ ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಶೇಖರ್ ಆನಂದ್ ಅವರು ಈ ಇಬ್ಬರು ಮಹಿಳೆಯರ ಮೇಲೆ ಅನುಮಾನಗೊಂಡು ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮುಂಬೈನಲ್ಲಿ 36 ಕೇಸ್ ದಾಖಲು!
ಬಂಧಿತ ಇಬ್ಬರು ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಮುಂಬೈನ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸಕ್ಕೆ ಸೇರಿಕೊಂಡು ಬಳಿಕ ಹೊಂಚು ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಇವರ ವಿರುದ್ಧ ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿ 36 ಮನೆಗಳವು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿದ್ದು, ಜಾಮೀನು ಪಡೆದು ಹೊರಗೆ ಬಂದು ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸುತ್ತಿದ್ದರು.
ಅಪಾರ್ಟ್‌ಮೆಂಟ್‌ಗಳೇ ಟಾರ್ಗೆಟ್:
ಆರೋಪಿಗಳು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ಇರುವ ಬಡಾವಣೆಗಳಲ್ಲಿ ಸುತ್ತಿ, ಸೆಕ್ಯೂರಿ ಗಾರ್ಡ್‌ಗಳನ್ನು ಪರಿಚಯಿಸಿಕೊಂಡು ಮನೆಗೆಲಸದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಬಳಿಕ ಕೆಲಸಕ್ಕೆ ಸೇರಿಕೊಂಡು ಮನೆ ಸದಸ್ಯರ ಚಟುವಟಿಕೆಗಳ ಬಗ್ಗೆ ನಿಗಾವಹಿಸುತ್ತಾರೆ. ಸಮಯ ಸಾಧಿಸಿ ಮನೆಯಲ್ಲಿರುವ ನಗದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಾರೆ. ಆರೋಪಿಗಳು ಕೆಲಸಕ್ಕೆ ಸೇರುವಾಗ ಮಾಲೀಕರಿಗೆ ನಕಲಿ ದಾಖಲೆ ನೀಡುತ್ತಿದ್ದರು.ಪಿಜಿಗಳಲ್ಲಿ ವಾಸ್ತವ್ಯ !
ಆರೋಪಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ ಗಿಟ್ಟಿಸಿಕೊಂಡು ರಾತ್ರಿ ವೇಳೆ ಪೇಯಿಂಗ್ ಗೆಸ್ಟ್(ಪಿಜಿ)ಗಳಲ್ಲಿ ತಂಗುತ್ತಿದ್ದರು. ಕಳ್ಳತನ ಮಾಡಿಕೊಂಡು ಪಿಜಿ ಖಾಲಿ ಮಾಡಿಕೊಂಡು ಮುಂಬೈಗೆ ಪರಾರಿಯಾಗುತ್ತಿದ್ದರು. ಬಳಿಕ ಕದ್ದ ಮಾಲುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು. ಮುಂಬೈನಲ್ಲಿ ಇವರ ದೊಡ್ಡ ಗ್ಯಾಂಗ್ ಸಕ್ರಿಯವಾಗಿದೆ.ಸೋಶಿಯಲ್ ಮಿಡಿಯಾದಲ್ಲಿ ಜಾಹೀರಾತು:
ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ರಚಿಸಿಕೊಂಡು ‘ಮನೆಗೆಲಸದವರು ಬೇಕಿದ್ದರೆ ಸಂಪರ್ಕಿಸಿ’ ಎಂದು ಜಾಹೀರಾತು ಹಾಕುತ್ತಾರೆ. ಸಾರ್ವಜನಿಕರು ಈ ಗ್ರೂಪ್‌ಗಳನ್ನು ನೋಡಿ ಸಂಪರ್ಕ ಮಾಡಿದರೆ, ಕೆಲಸಕ್ಕೆ ಸೇರಿಕೊಂಡು ಆರಂಭದಲ್ಲಿ ಮನೆಯ ಮಾಲೀಕರ ವಿಶ್ವಾಸ ಗಳಸಿ ಬಳಿಕ ಎರಡು-ಮೂರು ದಿನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಆರೋಪಿಗಳು ಮುಂಬೈನಲ್ಲಿ ಪಿಕ್ ಪಾಕೇಟ್ ಮಾಡಿ ಮೊಬೈಲ್, ಆಧಾರ್ ದಾಖಲೆಗಳನ್ನು ಜಾಹೀರಾತಿಗೆ ಬಳಸುತ್ತಿದ್ದರು.