ಲೋಕಾ ಬಲೆಗೆ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ

| Published : May 13 2025, 01:24 AM IST

ಸಾರಾಂಶ

ಪಿಡಿಒ ಅಶೋಕ ಗೊಂದಿ ಕಾಮಗಾರಿಯ ಒಟ್ಟು ಮೊತ್ತದಲ್ಲಿ ಅರ್ಧ ಅಂದರೆ ₹80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ನಂತರ ₹50 ಸಾವಿರಕ್ಕೆ ಒಪ್ಪಿಕೊಂಡು ಸೋಮವಾರ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿನ ಖಾಸಗಿ ಹೋಟೆಲ್‌ನಲ್ಲಿ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಹಾವೇರಿ: ಗೋದಾಮು ನಿರ್ಮಾಣ ಕಾಮಗಾರಿ ಬಿಲ್ ಪೂರೈಸಿದ್ದಕ್ಕೆ ₹50 ಸಾವಿರ ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.

ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಶೋಕ ದ್ಯಾಮಪ್ಪ ಗೊಂದಿ ಎಂಬವರೇ ಲಂಚಕ್ಕೆ ಬೇಡಿಕೆ ಇಟ್ಟ ಆರೋಪಿ. ತೆಗ್ಗಿಹಳ್ಳಿಯ ದಾವಲಮಲಿಕ್ ಇಮಾಮಸಾಬ್ ಮುರಡಿ ಎಂಬವರು ಫಕೀರನಂದಿಹಳ್ಳಿ ಗ್ರಾಮದಲ್ಲಿ ಗೋದಾಮು ನಿರ್ಮಾಣ ಕಾಮಗಾರಿಯನ್ನು ಪೂರೈಸಿದ್ದರು. ಕಾಮಗಾರಿ ಮೊತ್ತ ₹1.60 ಲಕ್ಷವನ್ನು ಮಂಜೂರು ಮಾಡಿಸಲು ಲಂಚ ಕೇಳಿದ್ದರು.ಪಿಡಿಒ ಅಶೋಕ ಗೊಂದಿ ಕಾಮಗಾರಿಯ ಒಟ್ಟು ಮೊತ್ತದಲ್ಲಿ ಅರ್ಧ ಅಂದರೆ ₹80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ನಂತರ ₹50 ಸಾವಿರಕ್ಕೆ ಒಪ್ಪಿಕೊಂಡು ಸೋಮವಾರ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿನ ಖಾಸಗಿ ಹೋಟೆಲ್‌ನಲ್ಲಿ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.ತನಿಖೆಯನ್ನು ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿಗಳಾದ ಲೋಕಾಯುಕ್ತ ಡಿವೈಎಸ್ಪಿ ಸಿ. ಮಧುಸೂದನ, ಪೊಲೀಸ್ ನಿರೀಕ್ಷಕ ಮಂಜುನಾಥ ಪಂಡಿತ್ ಪಿ.ಎನ್., ಬಸವರಾಜ ಹಳಬಣ್ಣನವರ, ದಾದಾವಲಿ ಕೆ.ಎಚ್., ಸಿಬ್ಬಂದಿಯಾದ ಸಿ.ಎಂ. ಬಾರ್ಕಿ, ಎಂ.ಕೆ. ನದಾಫ, ಬಿ.ಎಂ. ಕರ್ಜಗಿ, ಎಂ.ಕೆ. ಲಕ್ಷೇಶ್ವರ, ಆನಂದ ತಳಕಲ್ಲ, ಎಸ್‌.ಎನ್. ಕಡಕೋಳ, ಎಂ.ಬಿ. ಲಂಗೋಟಿ, ಬಿ.ಎಸ್. ಸಂಕಣ್ಣನವರ, ಎಂ.ಎಸ್. ಕೊಂಬಳಿ ಭಾಗವಹಿಸಿದ್ದರು.ಸಿಡಿಲು ಬಡಿದು ರೈತ ಸಾವು

ಹಾವೇರಿ: ಎತ್ತುಗಳನ್ನು ಮೇಯಿಸಲು ಹೋದಾಗ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟ ಘಟನೆ ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.ನಾಗಪ್ಪ ಕಣಸೋಗಿ (67) ಮೃತಪಟ್ಟ ರೈತ. ಸೋಮವಾರ ಸಂಜೆ ಎತ್ತುಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ, ತಹಸೀಲ್ದಾರ್ ಪ್ರಭಾಕರ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಲ್ಲಲ್ಲಿ ಮಳೆ: ಜಿಲ್ಲೆಯ ಹಾವೇರಿ ನಗರ ಸೇರಿದಂತೆ ವಿವಿಧಡೆ ಸೋಮವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆ ಸುರಿಯಿತು.ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣದಿಂದ ಕೂಡಿತ್ತು. ಸಂಜೆ ಏಕಾಏಕಿ ಮೋಡ ಕವಿದು ಗುಡುಗು, ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಜನರು ಬಿಸಿಲ ಧಗೆಯಿಂದ ನಿಟ್ಟುಸಿರು ಬಿಡುವಂತಾಯಿತು. ನಗರದ ಮಾರುಕಟ್ಟೆಯಲ್ಲಿ ಮಳೆಯಿಂದಾಗಿ ವ್ಯಾಪಾರಸ್ಥರು, ಜನರು ಸಮಸ್ಯೆ ಎದುರಿಸುವಂತಾಯಿತು. ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣಿಬೆನ್ನೂರು, ಹಾನಗಲ್ಲ, ಶಿಗ್ಗಾಂವಿ, ಸವಣೂರು, ರಟ್ಟೀಹಳ್ಳಿ ತಾಳೂಕಿನ ವಿವಿಧಡೆ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಮಳೆಯಾಗುತ್ತಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.