ಅಂದು ಕುಮಾರಸ್ವಾಮಿ, ಇಂದು ಬಿ.ವೈ.ವಿಜಯೇಂದ್ರ...!

| Published : Mar 05 2025, 12:35 AM IST

ಸಾರಾಂಶ

ರಾಜಕೀಯವನ್ನೇ ಉಸಿರಾಗಿಸಿಕೊಂಡಿರುವ ಮಂಡ್ಯ ಜನರ ಮನಗೆಲ್ಲುವುದಕ್ಕೆ ದೋಸ್ತಿ ನಾಯಕರು ಸರ್ಕಸ್ ನಡೆಸುತ್ತಿದ್ದಾರೆ. ಅಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದಲ್ಲಿ ಕೆಸರು ಗದ್ದೆಗಿಳಿದು ಭತ್ತ ನಾಟಿ ಮಾಡಿ ರೈತರ ಮನಗೆಲ್ಲುವ ಪ್ರಯತ್ನ ನಡೆಸಿದ್ದರೆ, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ಅನ್ನದಾತರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜಕೀಯವನ್ನೇ ಉಸಿರಾಗಿಸಿಕೊಂಡಿರುವ ಮಂಡ್ಯ ಜನರ ಮನಗೆಲ್ಲುವುದಕ್ಕೆ ದೋಸ್ತಿ ನಾಯಕರು ಸರ್ಕಸ್ ನಡೆಸುತ್ತಿದ್ದಾರೆ. ಅಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದಲ್ಲಿ ಕೆಸರು ಗದ್ದೆಗಿಳಿದು ಭತ್ತ ನಾಟಿ ಮಾಡಿ ರೈತರ ಮನಗೆಲ್ಲುವ ಪ್ರಯತ್ನ ನಡೆಸಿದ್ದರೆ, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ಅನ್ನದಾತರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದಾರೆ.

ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಭತ್ತದ ನಾಟಿ ಕಾರ್ಯ ನಡೆಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿ.ವೈ.ವಿಜಯೇಂದ್ರ ಕೂಡ ಇದೇ ಮೊದಲ ಬಾರಿಗೆ ಮಂಡ್ಯ ನೆಲದಲ್ಲಿ ಭತ್ತ ನಾಟಿ ಮಾಡುವುದರೊಂದಿಗೆ ತಾನೂ ಮಣ್ಣಿನ ಮಗ ಎಂಬುದನ್ನು ಬಿಂಬಿಸಿಕೊಂಡು ಅವರ ಮನಸೆಳೆಯುವತ್ತ ಹೆಜ್ಜೆ ಇಟ್ಟಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಮಗನಾಗಿದ್ದರೆ, ನಾನು ಇಲ್ಲಿಯ ಮೊಮ್ಮಗ. ನಾನೂ ಈ ಮಣ್ಣಿನಿಂದ ಪ್ರಭಾವಿತನಾಗಿದ್ದೇನೆ ಎಂಬ ಭಾವನಾತ್ಮಕ ಮಾತುಗಳನ್ನು ಆಡುವುದರೊಂದಿಗೆ ಸಕ್ಕರೆ ನಾಡಿನೊಳಗೆ ಪಕ್ಷ ಸಂಘಟನೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿದ್ದು, ಇದಕ್ಕೆ ಬಿಜೆಪಿಯ ಸ್ಥಳೀಯ ನಾಯಕರೂ ವಿಜಯೇಂದ್ರ ಅವರೊಂದಿಗೆ ಕೈಜೋಡಿಸಿದ್ದಾರೆ.

ಜೆಡಿಎಸ್- ಬಿಜೆಪಿ ಮೈತ್ರಿ ಕೇವಲ ನಾಮಕಾವಸ್ಥೆ ಎನ್ನುವಂತಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಜೆಡಿಎಸ್‌ನ ಯಾವುದೇ ನಾಯಕರಿಗೂ ಆಹ್ವಾನವಿರಲಿಲ್ಲ. ಫ್ಲೆಕ್ಸ್‌ಗಳಲ್ಲೂ ಜೆಡಿಎಸ್‌ನ ಯಾವುದೇ ನಾಯಕರ ಭಾವಚಿತ್ರವಿರಲಿಲ್ಲ. ಪಕ್ಕಾ ಬಿಜೆಪಿ ಕಾರ್ಯಕ್ರಮದಂತೆ ಗೋಚರಿಸುತ್ತಿತ್ತು.

ಸದ್ಯ ಜಿಲ್ಲೆಯಲ್ಲಿ ಬಿಜೆಪಿಯೊಳಗೆ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವವರೆಂದರೆ ಎಸ್.ಸಚ್ಚಿದಾನಂದ. ಅವರೇ ಭತ್ತ ನಾಟಿ ಕಾರ್ಯಕ್ರಮಕ್ಕೆ ಬಿ.ವೈ.ವಿಜಯೇಂದ್ರ ಅವರನ್ನು ಕರೆತರುವಲ್ಲಿ ಯಶಸ್ಸು ಕಂಡಿದ್ದಾರೆ. ಬಿಜೆಪಿಯಿಂದ ನಡೆದಿರುವ ಪ್ರಥಮ ಪ್ರಯೋಗ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದೊಳಗೆ ಎಸ್.ಸಚ್ಚಿದಾನಂದ ಅವರು ಬಿಜೆಪಿ ನಿರೀಕ್ಷೆಗೂ ಮೀರಿದ ಮತಗಳನ್ನು ಪಡೆದು ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಹಾಗಾಗಿ ಆ ಕ್ಷೇತ್ರ ಮತ್ತು ಅಲ್ಲಿನ ನಾಯಕತ್ವದ ಬಗ್ಗೆ ಬಿಜೆಪಿ ನಾಯಕರು ದೃಷ್ಟಿ ನೆಟ್ಟಿದ್ದಾರೆ. ಈಗಾಗಲೇ ವಕ್ಫ್ ಆಸ್ತಿ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈಗ ಬಿ.ವೈ.ವಿಜಯೇಂದ್ರ ಭತ್ತ ನಾಟಿ ಕಾರ್ಯವೂ ಕ್ಷೇತ್ರದಲ್ಲಿ ನಡೆದಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಡಿಯೂರಪ್ಪ ಹುಟ್ಟಿದ ಜಿಲ್ಲೆಯೊಳಗೆ ಎಚ್.ಡಿ..ಕುಮಾರಸ್ವಾಮಿ ಅವರಂತೆ ವರ್ಚಸ್ವಿ ನಾಯಕರಾಗಿ ಬೆಳವಣಿಗೆ ಕಾಣುವುದಕ್ಕೆ ಬಿ.ವೈ.ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆ. ಅವರಂತೆಯೇ ಜಿಲ್ಲೆಯ ಜನರ ಹೃದಯ ಗೆಲ್ಲುವುದಕ್ಕೆ ಮಣ್ಣಿನ ಮಗನ ವೇಷ ಧರಿಸಿ ಕೆಸರುಗದ್ದೆಗಿಳಿದು ನಾಟಿ ಮಾಡಿದ್ದಾರೆ. ಇದನ್ನು ಜನರು ಹೇಗೆ ಸ್ವೀಕರಿಸುವರೆಂಬುದನ್ನು ನೋಡಬೇಕಿದೆ.