ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರವಕ್ಫ್ ಎಂದು ಪಹಣಿಯಲ್ಲಿ ನಮೂದಾಗಿರುವುದನ್ನು ವಿಜಯಪುರ ಜಿಲ್ಲಾಡಳಿತ ಹಿಂಪಡೆದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಕೈಬಿಟ್ಟ ರೈತರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಹೀಗಾಗಿ ವಕ್ಫ್ ಪೆಡಂಭೂತ ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ವಿವಾದದ ಸ್ವರೂಪ ಪಡೆದುಕೊಂಡಿದೆ. ಕಾರಣ, ಈಗಾಗಲೇ ಭೂ ನ್ಯಾಯಮಂಡಳಿಯಲ್ಲಿ ಇತ್ಯರ್ಥ ಆಗಿದ್ದ ಕೇಸ್‌ಗಳ ಮೇಲೂ ವಕ್ಫ್ ಕಣ್ಣು ಬಿದ್ದಿದೆ. ರೈತರೇ ಗೇಣಿದಾರರು ಎಂದು ವಕ್ಫ್ ಬೋರ್ಡ್ ತಾನೇ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿ ಮತ್ತೆ ಆ ರೈತರಿಗೆ ನೋಟಿಸ್ ನೀಡಿದೆ. ಈ ಮೂಲಕ ನೂರಾರು ಎಕರೆ ಕೊಳ್ಳೆ ಹೊಡೆಯುವ ಹುನ್ನಾರ ನಡೆದ ಶಂಕೆ ವ್ಯಕ್ತವಾಗಿದೆ. ಇದರಿಂದ ವಕ್ಫ್‌ನಿಂದ ರೈತರು ಮತ್ತೆ ಬೇಸತ್ತಿದ್ದಾರೆ.ವಕ್ಫ್‌ನಲ್ಲೇ ಆಗಿದ್ದ ತೀರ್ಮಾನಕ್ಕೆ ಬೆಲೆಯಿಲ್ಲವೇ?:
1974ರಲ್ಲಿ ಗೆಜೆಟ್‌ನಲ್ಲಿ ವಕ್ಫ್ ಎಂದು ಘೋಷಿಸಲಾದ ಕೆಲವು ಭೂಮಿಗಳಿಗೆ ಆಗ ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಅದರಂತೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿಯ ಒಂದೇ ಗ್ರಾಮದಲ್ಲಿ 100ಕ್ಕೂ ಅಧಿಕ ಎಕರೆ ಭೂಮಿ ಹೊಂದಿರುವ 22ಕ್ಕೂ ಅಧಿಕ ರೈತರಿಗೆ ನೋಟಿಸ್ ಕೊಡಲಾಗಿತ್ತು. ಆಗ ಅಂದಿನ ವಕ್ಫ್ ಚೇರಮನ್ ಅವರ ಸಮಕ್ಷಮ ವಿಚಾರಣೆ ನಡೆದು, ಆ ಭೂಮಿಯ ಕಂದಾಯ ಕಟ್ಟಿಸಿಕೊಂಡು ಅದನ್ನು ನಿಮ್ಮಂತೆ ಮಾಡಿಕೊಳ್ಳಿ ಎಂದು ಸೂಚಿಸಲಾಗಿತ್ತು. ಹಾಗಾಗಿ ರೈತರು ಆ ವೇಳೆಯಲ್ಲೇ ಭೂ ತೆರಿಗೆ ಕಟ್ಟಿಕೊಂಡ ಬಳಿಕ 1984ರಲ್ಲಿ ಭೂ ನ್ಯಾಯಮಂಡಳಿಯ ಇಂಡಿ ವಿಶೇಷ ತಹಸೀಲ್ದಾರರು ಈ ಜಮೀನಿಗೆ ರೈತರೇ ಗೇಣಿದಾರರು ಎಂದು ಆದೇಶ ಕೂಡ ಹೊರಡಿಸಿದ್ದರು.ಈಗಾಗಲೇ ವಕ್ಫ್ ಟ್ರಿಬ್ಯೂನಲ್‌ನಲ್ಲಿ ವಿಚಾರಣೆಯಾಗಿ ರೈತರಂತೆ ಆಗಿದ್ದ ನಾದ ಕೆಡಿ ಗ್ರಾಮದ ಸರ್ವೇ ನಂಬರ್ 141, 142, 143, 144, 145, 146, 147, 184, 185 ಹೀಗೆ ಹಲವು ರೈತರ ಭೂಮಿಗಳ ವಿವಾದ ಇತ್ಯರ್ಥವಾಗಿದೆ. 1984ರಲ್ಲಿ ಬಗೆಹರಿದಿದ್ದ ಈ ಕೇಸ್‌ಗಳಿಗೆ ಈ ವಕ್ಫ್ ಬೋರ್ಡ್ ಮಾಹಿತಿಯಂತೆ ಮತ್ತೆ 2014ರಲ್ಲಿ ಇದೇ ರೈತರ ಪಹಣಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ಪಹಣಿಯಲ್ಲಿ ದಾಖಲಿಸಲಾಗಿದೆ. ಹೀಗಾಗಿ ಈಗ ಕಂದಾಯ ಇಲಾಖೆಯಿಂದ ನೋಟಿಸ್ ನೀಡಿದ್ದು, ರೈತರು ಗೊಂದಲಕ್ಕೆ ಒಳಗಾಗಿದ್ದಾರೆ.
ಜಂಬಗಿ, ನಾಗಠಾಣದಲ್ಲಿ ಬೇರೆ ಸಮಸ್ಯೆ ಉದ್ಭವ:ರೈತರಿಗೆ ನೋಟಿಸ್ ನೀಡದೆ ಇಂಡಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಲ್ಲಿ 44 ರೈತರ ಪಹಣಿಗಳಲ್ಲಿನ ಕಾಲಂ 11ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ದಾಖಲಿಸಲಾಗಿತ್ತು. ರೈತರು ಹೋರಾಟಕ್ಕಿಳಿದ ತಕ್ಷಣ ವಕ್ಫ್ ಹೆಸರನ್ನು ತೆಗೆದುಹಾಕಲಾಗಿದೆ. ಆದರೆ, ಜಂಬಗಿ ಹಾಗೂ ನಾಗಠಾಣ ಗ್ರಾಮಗಳು ಸೇರಿದಂತೆ ಹಲವು ಕಡೆಗಳಲ್ಲಿ 2018, 2019 ಹಾಗೂ 2022ರಲ್ಲಿ ರೈತರಿಗೆ ನೋಟಿಸ್ ನೀಡದೆಯೇ ನೂರಾರು ಎಕರೆ ಪಹಣಿಗಳಲ್ಲಿ ವಕ್ಫ್ ಎಂದು ದಾಖಲಿಸಲಾಗಿದೆ. ಕಳೆದ ತಿಂಗಳು ನೋಟಿಸ್ ನೀಡದೆ ವಕ್ಫ್ ಎಂದು ದಾಖಲಿಸಿದ್ದ ಆರ್‌ಟಿಸಿ(ಪಹಣಿ)ಗಳಲ್ಲಿ ರೈತರು ಆಕ್ರೋಶಗೊಂಡ ತಕ್ಷಣ ಹೇಗೆ ವಕ್ಫ್ ಹೆಸರು ತೆಗೆಯಲಾಗಿದೆಯೋ ಹಾಗೆಯೇ ನಮಗೂ ನೋಟಿಸ್ ನೀಡದೆ ವಕ್ಫ್ ಹೆಸರು ತೆಗೆಯಿರಿ ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
----------ಕೋಟ್.....
1974ರಲ್ಲಿ ವಕ್ಫ್‌ನಿಂದ ನೋಟಿಸ್ ನೀಡಲಾಗಿತ್ತು. ಅದಾದ ಬಳಿಕ ವಕ್ಫ್ ಚೇರಮನ್ ಕಮಿಟಿಯಲ್ಲಿ ವಿಚಾರಣೆಯಾಗಿ 1980ರಲ್ಲೇ ನಮ್ಮ ಭೂಮಿಗೆ ಕಟ್ಟಬೇಕಿದ್ದ ಭೂ ತೆರಿಗೆ ಕಟ್ಟಿ, ನಮ್ಮಂತೆ ಮಾಡಿಕೊಂಡಿದ್ದೇವೆ. ಆದರೂ ಮತ್ತೆ ಮತ್ತೆ ನಮ್ಮ ಭೂಮಿಯ ಪಹಣಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ನಮೂದಿಸಲಾಗಿದೆ. ವಕ್ಫ್‌ನಿಂದ ಮತ್ತೆ ನೋಟಿಸ್ ಜಾರಿಯಾಗಿದೆ. ವಕ್ಫ್‌ನಿಂದ ಪದೇಪದೇ ಈ ರೀತಿ ತೊಂದರೆಯಾಗುತ್ತಿದ್ದು, ಸರ್ಕಾರ ನಮಗೆ ನ್ಯಾಯ ಕೊಡಿಸಬೇಕಿದೆ.- ಇಬ್ರಾಹಿಂ ಸೈಫನ್ ಮುಲ್ಲಾ, ನಾದ ಕೆಡಿ ಗ್ರಾಮದ ರೈತಕಳೆದೊಂದು ತಿಂಗಳ ಅವಧಿಯಲ್ಲಿ ರೈತರಿಗೆ ನೋಟಿಸ್ ನೀಡದೆ 44 ರೈತರ ಪಹಣಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ಮ್ಯೂಟೇಷನ್ ಮಾಡಲಾಗಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ. ಇದರಂತೆ ಈ ಹಿಂದೆ ಹಲವು ವರ್ಷಗಳ ಹಿಂದೆ ರೈತರ ಪಹಣಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ದಾಖಲಿಸಿರುವುದು ಕಂಡುಬಂದಿದೆ. ಇದಕ್ಕಾಗಿಯೇ ಒಂದು ಟಾಸ್ಕ್‌ಫೋರ್ಸ್ ಸಮಿತಿ ಮಾಡಿದ್ದು, ಇಂತಹ ಪ್ರಕರಣಗಳನ್ನೆಲ್ಲ ಪರಿಶೀಲಿಸಿ ದಾಖಲೆ ಸಂಗ್ರಹಿಸಿ ಸರ್ಕಾರದ ಮುಂದಿಡಲಾಗುವುದು. ಈ ಎಲ್ಲ ಪ್ರಕರಣಗಳು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಲಿವೆ.
- ಟಿ.ಭೂಬಾಲನ್, ವಿಜಯಪುರ ಜಿಲ್ಲಾಧಿಕಾರಿ.