ಗವಿಸಿದ್ದೇಶ್ವರ ಜಾತ್ರೆಗೆ ತೆಪ್ಪೋತ್ಸವ ಮೆರಗು

| Published : Jan 13 2025, 12:46 AM IST

ಸಾರಾಂಶ

ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆಗೆ ಭಾನುವಾರ ಜರುಗಿದ ತೇಪ್ಪೋತ್ಸವ ಮೆರಗು ನೀಡಿತು.

ಮೊಳಗಿದ ಗವಿಸಿದ್ದೇಶ್ವರ ಜಯಘೋಷದ ಕರತಾಡನ । ಕಣ್ಮನ ಸೆಳೆದ ಗಂಗಾರತಿ । ಒಡಮೂಡಿದ ಭಕ್ತೋತ್ಸವಕನ್ನಡಪ್ರಭ ವಾರ್ತೆ ಕೊಪ್ಪಳ

ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆಗೆ ಭಾನುವಾರ ಜರುಗಿದ ತೇಪ್ಪೋತ್ಸವ ಮೆರಗು ನೀಡಿತು.

ನಗರದ ಗವಿಮಠದ ಕೆರೆಯಲ್ಲಿ ಅಪಾರ ಭಕ್ತ ಸಮೂಹ ಮಧ್ಯೆ ತೆಪ್ಪೋತ್ಸವ ವೈಭವವಾಗಿ ಭಕ್ತರ ಹರ್ಷೋದ್ಘಾರದ ಮಧ್ಯೆ ಜರುಗಿತು.

ತೆಪ್ಪೋತ್ಸವಕ್ಕೆ ಗವಿಮಠದಲ್ಲಿ ಲಿಂ. ಶ್ರೀ ಶಿವಶಾಂತವೀರ ಸ್ವಾಮೀಜಿ ಅವರಿದ್ದ ಅವಧಿಯಿಂದ ಈಗಿನವರೆಗೂ ಸುಮಾರು 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗವಿಮಠದ ಹಿರಿಯ ಜೀವಿಗಳಾದ ಈಶ್ವರಯ್ಯ ವಿರುಪಾಕ್ಷಯ್ಯ ಹಿರೇಮಠ ಹಾಗೂ ಈಶ್ವರಯ್ಯ ವೀರಭಸಯ್ಯ ಹಿರೇಮಠ ಇವರು ತೆಪ್ಪೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಗವಿಮಠದ ಅರ್ಚಕ ವೃಂದ ತೆಪ್ಪೋತ್ಸವಕ್ಕೆ ಧಾರ್ಮಿಕ ಪೂಜೆ ಸಲ್ಲಿಸಿತು.

ಪ್ರತಿವರ್ಷವೂ ತೆಪ್ಪೋತ್ಸವಕ್ಕೆ ವಿಶೇಷ ಸಾಧಕರು ಹಾಗೂ ಹಿರಿಯ ಚೇತನರ ಮೂಲಕ ಚಾಲನೆ ಕೊಡಿಸಲಾಗುತ್ತಿದ್ದು, ಅದರಂತೆ ಈ ವರ್ಷದ ದ ತೆಪ್ಪೋತ್ಸವಕ್ಕೆ ಗವಿಮಠದ ಹಿರಿಯ ಜೀವಿಗಳಾದ ಈಶ್ವರಯ್ಯ ವಿರುಪಾಕ್ಷಯ್ಯ ಹಿರೇಮಠ ಹಾಗೂ ಈಶ್ವರಯ್ಯ ವೀರಭಸಯ್ಯ ಹಿರೇಮಠ ಚಾಲನೆ ನೀಡಿದರು. ಈಶ್ವರಯ್ಯ ವಿರುಪಾಕ್ಷಯ್ಯ ಹಿರೇಮಠ ಲಿಂ. ಶಿವಶಾಂತವೀರ ಸ್ವಾಮೀಜಿ ಹಾಗೂ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಕಾರು ಚಾಲಕರಾಗಿ 45 ವರ್ಷ ಸೇವೆ ಸಲ್ಲಿಸಿದ್ದಾರೆ. ಶಿವಶಾಂತವೀರ ಶ್ರೀಗಳ ಬಳಿ ಅಪಾರ ಸೇವೆ ಸಲ್ಲಿಸಿ ಕಾರು ಚಾಲನೆ ಕಲಿತು ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

ಈಶ್ವರಯ್ಯ ವೀರಭಸಯ್ಯ ಹಿರೇಮಠ ಗವಿಮಠದಲ್ಲಿ 45 ವರ್ಷಗಳಿಂದ ಶ್ರೀಗಳ ಸೇವೆ ಮಾಡುತ್ತಾ ಬಂದಿದ್ದಾರೆ. ಇವರು ಎರಡು ಬಾರಿ ಸಾವಿನ ತುದಿಗೆ ಹೋಗಿ ಬಂದವರು. ಒಂದು ತಿಂಗಳ ಹಿಂದೆ ಆರಾಮಿಲ್ಲದೆ ಎಂಟು ದಿವಸ ಕೋಮಾದಲ್ಲಿದ್ದರು. ಹುಷಾರದ ನಂತರ ತೆಪ್ಪೋತ್ಸವಕ್ಕೆ ಚಾಲನೆ ನೀಡುವ ಸದಾವಕಾಶ ಇವರದ್ದಾಯಿತು.

ತೆಪ್ಪೋತ್ಸವ ಭಕ್ತೋತ್ಸವ:

ತೆಪ್ಪೋತ್ಸವಕ್ಕೆ ಚಾಲನೆ ದೊರೆತ ನಂತರ ಕೆರೆಯಂಗಳದಲ್ಲಿ ವಿದ್ಯುತ್ ದೀಪಗಳಲ್ಲಿ ಅಲಂಕಾರಗೊಂಡ ಗವಿಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆಗೊಂಡು ವಿರಾಜಮಾನವಾಗಿ ಪುಷ್ಪಗಳೊಂದಿಗೆ ಅಲಂಕಾರಗೊಂಡ ತೆಪ್ಪವನ್ನು ಅಂಬಿಗರು ಭಕ್ತಿ ಭಾವ, ಶ್ರದ್ಧೆಯಿಂದ ಕೆರೆಯ ಸುತ್ತಲೂ ಸಾಗಿಸಿದರು. ಶ್ರೀ ಗವಿಸಿದ್ದ ಪಾಹಿಮಾಂ, ಪಾಹಿಮಾಂ ಗವಿಸಿದ್ದ ಎಂದು ಭಕ್ತರು ಜಯಘೋಷ ಕೂಗಿದರು. ಜಯಘೋಷದ ಕರತಾಡನ ಮುಗಿಲು ಮುಟ್ಟಿತ್ತು. ತೆಪ್ಪೋತ್ಸವ ಭಕ್ತೋತ್ಸವವಾಗಿ ಮೆರಗು ಪಡೆಯಿತು. ಅಪಾರ ಸಂಖ್ಯೆಯ ಭಕ್ತರು ತೆಪ್ಪೋತ್ಸವ ಕಣ್ಣುಂಬಿಕೊಂಡರು. ತೆಪ್ಪೋತ್ಸವ ಜರುಗುವ ವೇಳೆಯಲ್ಲಿ ಗವಿಸಿದ್ದೇಶ್ವರ ಸುಪ್ರಭಾತವನ್ನು ಸಂಗೀತಗಾರರು ಹಾಡಿದರು.

ಧಾರವಾಡದ ಎಸ್.ಎಸ್. ಹಿರೇಮಠ ಹಾಗೂ ಸಂಗಡಿಗರು ಮತ್ತು ಸಿವಿ, ಸಿಡಿ ಕಲಾ ತಂಡ, ಹರ್ಲಾಪೂರ ಸಂಗೀತ ಕಲಾವಿದರು, ಗವಿಮಠದ ಸಂಗೀತಾ ಪಾಠಶಾಲೆ ಮಕ್ಕಳು ಸಂಗೀತ ರಸದೂತಣ ನೀಡಿದರು.

ಕಣ್ಮನ ಸೆಳೆದ ಗಂಗಾರತಿ:

ತೆಪ್ಪೋತ್ಸವ ಜರುಗುವ ವೇಳೆ ಗವಿಮಠದಲ್ಲಿ ಗಂಗಾರತಿ ಸಹ ಜರುಗಿತು.

ತೆಪ್ಪೋತ್ಸವ ಜತೆಗೆ ಭಕ್ತರು ಗಂಗಾರತಿಯನ್ನು ಕಣ್ಣುಂಬಿಕೊಂಡರು. ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು. ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಗಂಗಾ ಆರತಿ ವಿಶೇಷ ಮೆರಗು ನೀಡಿತು.