ಸಾರಾಂಶ
ಅಭಿವೃದ್ಧಿಯ ಸಮಾಧಿ, ಹತ್ಯೆ ಹಾಗೂ ಆತ್ಮಹತ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಟ್ರೇಡ್ ಮಾರ್ಕ್ ಆಗಿದೆ. ಇದೊಂದು ಜನರ ಜೀವಕ್ಕೆ ಗ್ಯಾರಂಟಿಯಿಲ್ಲದ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಭಿವೃದ್ಧಿಯ ಸಮಾಧಿ, ಹತ್ಯೆ ಹಾಗೂ ಆತ್ಮಹತ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಟ್ರೇಡ್ ಮಾರ್ಕ್ ಆಗಿದೆ. ಇದೊಂದು ಜನರ ಜೀವಕ್ಕೆ ಗ್ಯಾರಂಟಿಯಿಲ್ಲದ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.ನಗರದ ವೀರಾಪುರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ, 692 ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ನೇಹಾ ಹತ್ಯೆ ಪ್ರಕರಣದ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ಕೀಳುಮಟ್ಟದ ಹೇಳಿಕೆ ನೀಡಿದ್ದರು. ಇದರಿಂದಾಗಿ ಕೊಲೆಗಡುಕರಿಗೆ ಹೆದರಿಕೆ ಇಲ್ಲದಂತಾಗಿ, ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿ ಹತ್ಯೆಯಾಗಿದೆ. ನೇಹಾ ಪ್ರಕರಣದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ವರ್ತಿಸಬೇಕಿತ್ತು. ಜನಾಂದೋಲನದ ಮೂಲಕ ಹೋರಾಟ ನಡೆದ ಮೇಲೆ ಸಿದ್ದರಾಮಯ್ಯ ಎಚ್ಚರಗೊಂಡು ಪ್ರಕರಣದ ಗಂಭೀರತೆ ಅರಿತು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಮೊದಲೇ ಅಂಜಲಿ ಕುಟುಂಬಸ್ಥರು ಜೀವ ಬೆದರಿಕೆ ಇದೆ ಎಂದು ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ರಾಜಿ ಸಂಧಾನ ಏಕೆ ಮಾಡಬೇಕಿತ್ತು? ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ತಗೆದುಕೊಂಡ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ದೂರಿದರು.====
ಏಕಕಾಲಕ್ಕೆ ಶಿಕ್ಷೆ ವಿಧಿಸಿ: ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣವನ್ನು ತ್ವರಿತ ನ್ಯಾಯಾಲಯ ಮೂಲಕ ವಿಚಾರಣೆ ಮಾಡಿ ಆರೋಪಿಗಳಿಗೆ ಏಕಕಾಲಕ್ಕೆ ಉಗ್ರವಾದ ಶಿಕ್ಷೆ ನೀಡಬೇಕು. ಹು-ಧಾ ಮಹಾನಗರದಲ್ಲಿ ಗಾಂಜಾ, ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಇಂತಹ ಪ್ರಕರಣಗಳು ಹೆಚ್ಚಾಗಿರುವಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಬೇಕು. ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ತಿಳಿಸಿದವರ ಹೆಸರನ್ನು ಗೌಪ್ಯವಾಗಿ ಇಡಬೇಕು. ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು. ಈ ಎರಡು ಘಟನೆಗಳು ಸರ್ಕಾರದ ವೈಫಲ್ಯದಿಂದಲೇ ಆಗಿದೆ ಎಂಬುದನ್ನು ಗೃಹ ಸಚಿವರು ಈಗಲಾದರೂ ಒಪ್ಪಿಕೊಳ್ಳಬೇಕು ಎಂದರು.ಸರ್ಕಾರ ಕೂಡಲೇ ಅಂಜಲಿ ಕುಟುಂಬಕ್ಕೆ ಕನಿಷ್ಠ ₹25 ಲಕ್ಷ ಪರಿಹಾರವನ್ನು ಘೋಷಣೆ ಮಾಡಬೇಕು. ಮನೆ ನೀಡಬೇಕು. ಒಂದು ವೇಳೆ ₹25 ಲಕ್ಷಕ್ಕಿಂತ ಕಡಿಮೆ ಪರಿಹಾರ ನೀಡಿದರೆ ಅವರ ಕುಟುಂಬಕ್ಕೆ ಅನ್ಯಾಯ ಮಾಡಿದಂತೆ ಎಂಬುದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಲಿ ಎಂದರು.19ಎಚ್‌ಯುಬಿ33, 34
ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.