ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 4,11,582 ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 4,11,582 ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದ್ದಾರೆ.ಸರಕಾರ ಮಹಿಳೆಯರು ಆಥಿಕವಾಗಿ ಸಬಲೀಕರಣ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ಗೃಹಲಕ್ಷ್ಮೀ ಯೋಜನೆಯನ್ನು 2023, ಜೂನ್ 6ರಂದು ಜಾರಿಗೆ ತಂದಿದೆ. ಪ್ರಾರಂಭದಲ್ಲಿ 2023ರ ಆಗಸ್ಟ್ ತಿಂಗಳಲ್ಲಿ 3,58,285 ಫಲಾನುಭವಿಗಳು ಇದ್ದರು. ಈಗ ಸೆಪ್ಟೆಂಬರ್ 2025ಕ್ಕೆ 4,11,582 ಫಲಾನುಭವಿಗಳಾಗಿದ್ದಾರೆ. ಸೆಪ್ಟಂಬರ್-2025ರ ಮಾಹೆಯ ಒಟ್ಟು ₹82.31 ಕೋಟಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮೆ ಆಗಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಗೆ 24 ಕಂತುಗಳಲ್ಲಿ ₹1901.23 ಕೋಟಿ ಅನುದಾನ ಬಿಡುಗಡೆಯಾಗಿದೆ. ಫೆಬ್ರವರಿ ಮತ್ತು ಮಾರ್ಚ್-2025ರ ಮಾಹೆಯ ಹಣ ತಾಂತ್ರಿಕ ಕಾರಣಗಳಿಂದ ಜಮೆ ಆಗಿಲ್ಲ. ಬಿಡುಗಡೆಯಾದರೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳು ಎದುರಿಸುತ್ತಿರುವ ಐಟಿ, ಜಿಎಸ್ಟಿ ಸಮಸ್ಯೆಯನ್ನು ಫಲಾನುಭವಿಗಳು ತಾವು ತೆರಿಗೆ ಪಾವತಿದಾರರು ಇಲ್ಲವೆಂಬ ಹಿಂಬರಹವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಮಾಹಿತಿ ಕಚೇರಿಗಳಿಗೆ ಸಲ್ಲಿಸಿರುತ್ತೀರಿ. ಈ ಕುರಿತು ಪ್ರಧಾನ ಕಚೇರಿಯ ಹಂತದಲ್ಲಿ ಪರಿಶೀಲನೆಗೆ ಒಳಪಡುತ್ತದೆ. ಪರಿಶೀಲನೆ ನಂತರ ಸಮಸ್ಯೆಗಳು ಬಗೆಹರಿಯಲಿವೆ. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಹಾಯವಾಣಿ ಸಂಖ್ಯೆ 181ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.