ಅಷ್ಟಮಂಗಲಕ್ಕೆ ವಿಧಾನಗಳು ಅನೇಕ: ರಾಘವೇಶ್ವರ ಶ್ರೀ

| Published : Sep 18 2024, 01:46 AM IST

ಸಾರಾಂಶ

ಮಹಾತ್ಮರು ಹುಟ್ಟುವ ಕುಲ ಪುಣ್ಯ ಪಡೆಯುತ್ತದೆ. ತಾಯಿ ಸಾರ್ಥಕ್ಯ ಪಡೆಯುತ್ತಾಳೆ. ಭೂಮಿಯೂ ಧನ್ಯವಾಗುತ್ತದೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ಅಷ್ಟಮಂಗಲಕ್ಕೆ ಹಲವು ಆಯಾಮಗಳಿದ್ದು, ಇದರಲ್ಲಿ ಕಾಲ, ದೇಶ, ಶ್ವಾಸ, ದಶಾ, ಸ್ಪಷ್ಟಾಂಗ, ಪೃಚ್ಛಕ ನಿಂತ ದಿಕ್ಕು, ಪ್ರಶ್ನಾಕ್ಷರಗಳು, ಪೃಚ್ಛಕನ ಸ್ಥಿತಿ, ಪೃಚ್ಛಕನ ಚೇಷ್ಟೆ, ಭಾವ, ನೋಟ, ವಸ್ತ್ರ, ತಾಂಬೂಲ, ಅನುಭವಕ್ಕೆ ಬರುವ ಸಕಲ ಸಂಗತಿಗಳು ಇದರಲ್ಲಿ ಸೇರುತ್ತವೆ. ಇವೆಲ್ಲವನ್ನೂ ದೈವಜ್ಞ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ಮುಂಬೈ- ಪುಣೆ, ದೊಂಬಿವಿಲಿ ಮತ್ತು ಚೆನ್ನೈ ವಲಯದ ಸರ್ವಸೇವೆ ಸ್ವೀಕರಿಸಿ, 59ನೇ ದಿನವಾದ ಮಂಗಳವಾರ ಕಾಲ ಮಾಲಿಕೆಯ ಪ್ರವಚನ ಅನುಗ್ರಹಿಸಿದರು.ಅಷ್ಟಮಂಗಲದಲ್ಲಿ ದೈವಜ್ಞನಿಗೆ ಏನಾಗುತ್ತಿದೆಯೋ ಅದನ್ನು ಪ್ರಚ್ಛಕನಿಗೆ ಅನ್ವಯಿಸುವುದು ದಶಾ ಎನಿಸಿಕೊಳ್ಳುತ್ತದೆ. ಅಂತೆಯೇ ಸ್ಪಷ್ಟಾಂಗ, ಪೃಚ್ಛಕ ನಿಂತ ರಾಶಿ, ಪೃಚ್ಚಕ ನಿಂತ ದಿಕ್ಕು, ಪ್ರಶ್ನಾಶ್ನರಗಳ ಮೂಲಕವೂ ಭವಿಷ್ಯವನ್ನು ವಿಶ್ಲೇಷಿಸಬಹುದು ಎಂದರು.

ಇನ್ನು ಪೃಚ್ಛಕನ ಸ್ಥಿತಿ ಕೂಡಾ ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಶುಭಕಾರ್ಯಗಳಿಗೆ ಬಲಗಾಲನ್ನು ಮುಂದಿಟ್ಟು ಹೋಗಬೇಕು. ಆದರೆ ಅಷ್ಟಮಂಗಲದಲ್ಲಿ ಎಡಗಾಲು ಮುಂದಿಟ್ಟು ಬಂದರೆ ಶುಭ ಎಂದು ಸೂಚಿಸಿದರು.ಬುಧವಾರ ನಡೆಯುವ ಕೆಕ್ಕಾರು ರಾಮದೇವರ ಅನಾವರಣಕ್ಕೆ ಪೀಠಿಕೆ ಎಂಬಂತೆ ಕೆಕ್ಕಾರು ಊರಿಗೆ ಸಂಬಂಧಿಸಿದ ಅನಾವರಣ ಮಂಗಳವಾರ ಆಗಿದೆ. ಗುರವಹ ಭಟ್ಟರ ಮನೆಯ ಅನಾವರಣ ಅನೇಕ ಗುರುಗಳನ್ನು ನೀಡಿದ ಮನೆ. ಸಮಾಜವನ್ನು ಬೆಳಗಿದ ಇಬ್ಬರು ಗುರುಗಳನ್ನು ಕೊಟ್ಟ ಮನೆ. ದೊಡ್ಡಗುರುಗಳು ಬರೆದ ಪತ್ರದಲ್ಲಿ ಇದರ ಉಲ್ಲೇಖವಿದೆ. ಮನೆಯ ಮಗುವನ್ನು ಸಮಾಜಕ್ಕೆ ನೀಡುವುದು ಸುಲಭವಲ್ಲ. ಅದು ಕಠಿಣ ನಿರ್ಧಾರ. 32ನೇ ಗುರುಗಳ ಕಾಲದಲ್ಲಿ ಮಠ ಅತ್ಯಂತ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. 33ನೇ ಪೀಠಾಧಿಪತಿಗಳು ಅದ್ಭುತ ಯೋಗಶಕ್ತಿ ಹೊಂದಿದ್ದವರು ಎಂದು ಬಣ್ಣಿಸಿದರು.

ಮಹಾತ್ಮರು ಹುಟ್ಟುವ ಕುಲ ಪುಣ್ಯ ಪಡೆಯುತ್ತದೆ. ತಾಯಿ ಸಾರ್ಥಕ್ಯ ಪಡೆಯುತ್ತಾಳೆ. ಭೂಮಿಯೂ ಧನ್ಯವಾಗುತ್ತದೆ. ಗುರವಹ ಮನೆ ಎರಡಕ್ಕಿಂತ ಹೆಚ್ಚು ಗುರುಗಳನ್ನು ಕೊಟ್ಟ ಮನೆ ಎನ್ನುವುದನ್ನು ಸೂಚಿಸುತ್ತದೆ. ಗುರುಗಳನ್ನು ನೀಡಿದ್ದಲ್ಲದೇ ಎಲ್ಲರೂ ಗುರುಸೇವೆಯನ್ನು ಸಮರ್ಪಣಾ ಮನೋಭಾವದಿಂದ ಮಾಡುತ್ತಾ ಬಂದಿದ್ದಾರೆ. ಮನೆಯನ್ನೇ ಮಠಕ್ಕೆ ಬಿಟ್ಟುಕೊಟ್ಟ ಮನೆ ಎಂದರು.ವಿಜ್ಞಾನ ಶಾಸ್ತ್ರದ ವಿಚಾರದಲ್ಲಿ ತಲೆ ಹಾಕಬಾರದು. ಶಾಸ್ತ್ರದಲ್ಲಿ ಹೇಳಿರುವುದು ಕಂದಾಚಾರ ಎನ್ನುವುದನ್ನು ವಿಜ್ಞಾನ ನಿರೂಪಿಸಿದ ಮೇಲೆ ಅದರ ವಿರುದ್ಧ ಮಾತನಾಡಲಿ. ಶಾಸ್ತ್ರವನ್ನು ಇಲ್ಲ ಎನ್ನಲು ಬೇಕಾದ ಜ್ಞಾನ ನಮ್ಮ ಆಧುನಿಕ ವಿಜ್ಞಾನ ಇಲ್ಲ ಎಂಬ ಮಾತ್ರಕ್ಕೆ ಅದು ಕಂದಾಚಾರ ಎಂದು ಹೇಳಲಾಗದು ಎಂದು ಎಚ್ಚರಿಸಿದರು.ಗುರುಮನೆ ಕೃತಿಯ ಲೋಕಾರ್ಪಣೆಯನ್ನು ಶ್ರೀಗಳು ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.ಇಂದು ರಾಘವೇಶ್ವರ ಶ್ರೀಗಳಿಂದ ಸೀಮೋಲ್ಲಂಘನೆ

ಗೋಕರ್ಣ: ಅಶೋಕೆಯ ಗುರುದೃಷ್ಟಿಯಲ್ಲಿ 60 ದಿನಗಳ ಚಾತುರ್ಮಾಸ ವ್ರತ ಕೈಗೊಂಡಿರುವ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಬುಧವಾರ ಸೀಮೋಲ್ಲಂಘನದೊಂದಿಗೆ ವ್ರತ ಸಂಪನ್ನಗೊಳಿಸಲಿದ್ದಾರೆ.

ಶ್ರೀಗಳು ಸೆ. 18ರಂದು ಮಧ್ಯಾಹ್ನ 12 ಗಂಟೆಗೆ ಗಂಗಾವಳಿ ನದಿ ದಾಟಿ ಪೂಜೆ ಸಲ್ಲಿಸುವ ಮೂಲ ವ್ರತ ಸಂಪನ್ನಗೊಳ್ಳಲಿದೆ. ಬಳಿಕ ಅಶೋಕೆಯ ಮಲ್ಲಿಕಾರ್ಜುನನ ದರ್ಶನ ಪಡೆದು, 1.30ಕ್ಕೆ ಧರ್ಮಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.