ಉತ್ತರ ಕನ್ನಡ ಕ್ಷೇತ್ರದಲ್ಲಿ ಮಹಿಳಾ ಶತಾಯುಷಿಗಳೇ ಅಧಿಕ

| Published : Apr 14 2024, 01:47 AM IST

ಉತ್ತರ ಕನ್ನಡ ಕ್ಷೇತ್ರದಲ್ಲಿ ಮಹಿಳಾ ಶತಾಯುಷಿಗಳೇ ಅಧಿಕ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೂರು ವರ್ಷ ತುಂಬಿದ ೨೫೪ ಶತಾಯುಷಿಗಳು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ೨೫೪ ಶತಾಯುಷಿಗಳಿದ್ದು, ಇವರಲ್ಲಿ ೮೬ ಪುರುಷರು, ೧೬೮ ಮಹಿಳೆಯರಿದ್ದಾರೆ. ಮಹಿಳಾ ಶತಾಯುಷಿಗಳೇ ಹೆಚ್ಚಿದ್ದಾರೆ.

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ೧೨ ಪುರುಷರು ಮತ್ತು ೨೨ ಮಹಿಳೆಯರು, ಕಾರವಾರದಲ್ಲಿ ೧೬ ಪುರುಷರು, ೩೬ ಮಹಿಳೆಯರು, ಕುಮಟಾದಲ್ಲಿ ೯ ಪುರುಷರು, ೨೨ ಮಹಿಳೆಯರು, ಭಟ್ಕಳದಲ್ಲಿ ೧೪ ಪುರುಷರು ಮತ್ತು ೧೪ ಮಹಿಳೆಯರು, ಶಿರಸಿಯಲ್ಲಿ ೧೮ ಪುರುಷರು ಮತ್ತು ೧೭ ಮಹಿಳೆಯರು, ಯಲ್ಲಾಪುರದಲ್ಲಿ ೮ ಪುರುಷರು ಮತ್ತು ೨೫ ಮಹಿಳೆಯರು ಒಟ್ಟು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದ ೨೧೩ ಶತಾಯುಷಿಗಳು ಇದ್ದಾರೆ.

ಕಳೆದ ೨೦೨೩ರಲ್ಲಿ ನಡೆದ ವಿಧಾನಸಭಾ ಚುನಾಚಣೆಯಲ್ಲಿ ಉತ್ತರ ಕನ್ನಡದ ಆರು ಕ್ಷೇತ್ರದಲ್ಲಿ ೬೦ ಪುರುಷರು, ೧೨೭ ಮಹಿಳೆಯರು ಸೇರಿ ಒಟ್ಟು ೧೮೭ ಜನರು ಶತಾಯುಷಿಗಳಿದ್ದರು. ಈ ಬಾರಿ ಲೋಕಸಭಾ ಚುನಾವಣೆ ವೇಳೆ ಆರು ಕ್ಷೇತ್ರದಲ್ಲಿ ೨೧೩ ಶತಾಯುಷಿಗಳಿದ್ದು, ೨೬ ಜನ ಶತಾಯುಷಿಗಳು ಹೆಚ್ಚಾದಂತಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ೩ ಪುರುಷರು ಮತ್ತು ೧೨ ಮಹಿಳೆಯರು, ಕಿತ್ತೂರು ಕ್ಷೇತ್ರದಲ್ಲಿ ೬ ಪುರುಷರು ಮತ್ತು ೨೦ ಮಹಿಳಾ ಶತಾಯುಷಿಗಳು ಸೇರಿ ಒಟ್ಟು ೪೧ ಶತಾಯುಷಿ ಮತದಾರರಿದ್ದಾರೆ. ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೮ ವಿಧಾನಸಭಾ ಕ್ಷೇತ್ರಗಲಿವೆ. ಭಟ್ಕಳದಲ್ಲಿ ಮಹಿಳಾ, ಪುರುಷರು ತಲಾ ೧೪ ಇದ್ದರೆ, ಶಿರಸಿಯಲ್ಲಿ ಪುರುಷರು ೧೮, ಮಹಿಳೆಯು ೧೭ ಜನರಿದ್ದಾರೆ. ಉಳಿದಂತೆ ಆರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಶತಾಯುಷಿಗಳೇ ಅಧಿಕವಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೂರು ವರ್ಷ ತುಂಬಿದ ೨೫೪ ಶತಾಯುಷಿಗಳು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲಿದ್ದಾರೆ.

೧೬,೩೮,೪೫೦ ಮತದಾರರು

ಪ್ರಸ್ತುತ ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯಲ್ಲಿ ೮,೨೨,೪೨೯ ಪುರುಷರು ಮತ್ತು ೮,೧೬,೦೦೬ ಮಹಿಳೆಯರು ಹಾಗೂ ೧೫ ಜನ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು ೧೬,೩೮,೪೫೦ ಮತದಾರರಿದ್ದು, ಇವರಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸುವ ೨೧,೭೪೫ ಯುವಕರು ಮತ್ತು ೧೯,೭೪೬ ಯುವತಿಯರು ಮತ್ತು ೩ ಜನ ತೃತೀಯ ಲಿಂಗಿಗಳು ಸೇರಿದಂತೆ ೪೧,೪೯೪ ಹೊಸ ಮತದಾರರು ಇದ್ದಾರೆ.