ಸಾರಾಂಶ
ದಾವಣಗೆರೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಜೆ.ಆರ್.ಷಣ್ಮುಖಪ್ಪ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ದಾವಣಗೆರೆಪಡಿತರ ವ್ಯವಸ್ಥೆ, ನ್ಯಾಯಬೆಲೆ ಅಂಗಡಿ, ಬೆಂಬಲ ಬೆಲೆ, ಸಕ್ಕರೆ ಕಾರ್ಖಾನೆ, ಜವಳಿ, ರೇಷ್ಮೆ ಉದ್ಯಮ, ಅಡಿಕೆ ಸೇರಿ ಪ್ರತಿ ವಲಯದಲ್ಲೂ ಸಹಕಾರ ರಂಗವು ವ್ಯಾಪಿಸಿದ್ದು, ಆರೋಗ್ಯ ಕ್ಷೇತ್ರಕ್ಕೂ ಇದು ಕಾಲಿಟ್ಟಿರುವುದು, ರೈತರು, ಕೃಷಿ ಕೂಲಿ ಕಾರ್ಮಿಕರು, ಬಡ, ಮಧ್ಯಮ ವರ್ಗಕ್ಕೆ ಸಹಕಾರಿಯಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ ತಿಳಿಸಿದರು.
ನಗರದ ಶ್ರೀ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಹಕಾರ ನಿಯಮಿತ ಬೆಂಗಳೂರು, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಪಟ್ಟಣ ಸಹಕಾರ ಬ್ಯಾಂಕ್‌ಗ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ, ಇಫ್ಕೋ ಲಿ, ಕ್ರಿಪ್ಕೋ ಲಿ.ನಿಂದ ಹಮ್ಮಿಕೊಂಡಿದ್ದ 79ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಯೊಂದಿಗೆ ಸಹಕಾರ ಚಳವಳಿ ಬೆಳವಣಿಗೆ ಕಂಡಿತು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರ ರಂಗ ತಲುಪಿದೆ ಎಂದರು.ಕೃಷಿ ಪ್ರಧಾನ ಭಾರತದ ಎಲ್ಲಾ ರಾಜ್ಯದಲ್ಲೂ ಸಹಕಾರ ಸಂಘ ಸ್ಥಾಪಿಸಿ ಸಹಕಾರ ಚಳವಳಿಗೆ ಉತ್ತೇಜನ ನೀಡಿದ್ದು ನೆಹರು. 1906ರಲ್ಲಿ ಆರಂಭವಾದ ಸಹಕಾರ ಚಳವಳಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಕೆ.ಮಹೇಶ್ವರಪ್ಪ ಮಾತನಾಡಿ, ಹಿಂದೆ ಅವಿಭಜಿತ ಧಾರವಾಡ ಜಿಲ್ಲೆ ಗದಗ ತಾ. ಕಣಗಿನಹಾಳ್ ಗ್ರಾಮದಲ್ಲಿ 8.5.1905ರಲ್ಲಿಸಹಕಾರಿ ದುರೀಣ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ ಅಧ್ಯಕ್ಷತೆಯಲ್ಲಿ ಸಹಕಾರಿ ಪತ್ತಿನ ಸಂಘ ಸ್ಥಾಪನೆಯಾಯಿತು. ಎಸ್ಸೆಸ್ ಪಾಟೀಲರನ್ನು ಭಾರತದ ಸಹಕಾರಿ ಚಳವಳಿ ಪಿತಾಮಹರೆಂದು ಕರೆಯಲಾಗುತ್ತದೆ. ಸಹಕಾರ ಸಪ್ತಾಹದ ಅವಧಿಯಲ್ಲಿ ಕಳೆದ ವರ್ಷದ ಸಹಕಾರ ಚಳವಳಿಯ ಸಾಧನೆ, ವೈಫಲ್ಯ ಪರಾಮರ್ಶಿಸಿ, ಮುಂದಿನ ವರ್ಷಕ್ಕೆ ಗುರಿ ಇಟ್ಟುಕೊಳ್ಳುವ ಸಂಪ್ರದಾಯವನ್ನು ಸಪ್ತಾಹ ಬೆಳೆಸಿಕೊಂಡು ಬಂದಿದೆ ಎಂದರು.ಸಬಲರಾಗಿಸುವ ಕೆಲಸ:
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಎಲ್ಲರೂ ಒಬ್ಬನಿಗಾಗಿ, ಒಬ್ಬನು ಎಲ್ಲರಿಗಾಗಿ ಎಂಬ ಸಹಕಾರ ತತ್ವದಡಿ ಸಹಕಾರ ಸಂಘ ಜನ್ಮ ತಾಳಿವೆ. ಸಂಘಗಳು ತತ್ವಮೌಲ್ಯ ಮರೆತರು, ಸಂಘಗಳು ವಿನಾಶದ ಅಂಚಿಗೆ ಬಂದು ನಿಲ್ಲುತ್ತವೆ. ದೇಶದಲ್ಲಿ ಬಹುತೇಕರು ಕೃಷಿಕರಾಗಿದ್ದು, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂತಹವರಿಗೆ ಸಹಕಾರ ಕ್ಷೇತ್ರದ ಮೂಲಕ ನೆರವು ನೀಡುವ ಮೂಲಕ ಸಬಲರನ್ನಾಗಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ.ದ ಅಧ್ಯಕ್ಷ ಜಿ.ಡಿ.ಗುರುಸ್ವಾಮಿ, ಶಿವ ಕೋ-ಆಪ್ ಬ್ಯಾಂಕ್ ಉಪಾಧ್ಯಕ್ಷ ಸಿ.ಚಂದ್ರಶೇಖರ, ಸಿಟಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಎನ್.ಎಂ.ನಿರಂಜನಮೂರ್ತಿ, ಒಕ್ಕೂಟದ ಉಪಾಧ್ಯಕ್ಷ ಟಿ.ರಾಜಣ್ಣ, ಸಿಇಒ ಮಂಗಳಗೌಡ ದಾನಪ್ಪಗೌಡ, ಶಿಮುಲ್ ನಿರ್ದೇಶಕರಾದ ಕೆ.ಎನ್.ಸೋಮಶೇಖರಪ್ಪ, ಎಸ್.ಬಿ.ಶಿವಕುಮಾರ, ಒಕ್ಕೂಟದ ನಿರ್ದೇಶಕರಾದ ಡಿ.ಎಂ.ಮುರುಗೇಂದ್ರಯ್ಯ, ಎನ್.ಕುಮಾರ, ಕೆ.ಜಿ.ಸುರೇಶ, ಎಸ್.ಜಿ.ಪರಮೇಶ್ವರಪ್ಪ, ಡಿ.ಶಿವಗಂಗಮ್ಮ, ಅನ್ನಪೂರ್ಣ, ಎಂ.ವಿರಾಜ್, ಎನ್.ಎಂ.ಹಾಲಸ್ವಾಮಿ, ಎ.ಎಂ.ಮಂಜುನಾಥ, ಸಿ.ವೆಂಕಟೇಶ ನಾಯ್ಕ, ವಿ.ಪಿ.ಮಹಮ್ಮದ್ ಷಫೀವುಲ್ಲಾ, ಎಚ್.ತಿಪ್ಪೇಸ್ವಾಮಿ, ಸಹಕಾರ ಸಂಘಗಳ ಉಪ ನಿಬಂಧಕಿ ಎಸ್.ಮಂಜುಳಾ, ಇತರರು ಇದ್ದರು. ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್.ಸುರೇಂದ್ರ ಉಪನ್ಯಾಸ ನೀಡಿದರು. ಸಹಕಾರ ಶಿಕ್ಷಕ ಕೆ.ಎಚ್.ಸಂತೋಷಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು. ...........ದಾವಣಗೆರೆ ಜಿಲ್ಲೆಯಲ್ಲಿ 1456 ಸಹಕಾರ ಸಂಘಗಳು ನೋಂದಣಿಯಾಗಿದ್ದು, 1108 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 379 ಹಾಲು ಉತ್ಪಾದಕರ ಸಹಕಾರ ಸಂಘಗಳು, 180 ಕೃಷಿ ಪತ್ತಿನ ಸಹಕಾರ ಸಂಘ, 78 ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, 471 ವಿವಿಧ ರೀತಿಯ ಸಹಕಾರ ಸಂಘಗಳಿವೆ. ಚನ್ನಗಿರಿ ತುಮ್ಕೋಸ್ ಸಂಸ್ಥೆ 800.00 ಕೋಟಿ ವಹಿವಾಟು ನಡೆಸುತ್ತಿದೆ. ಜಿಲ್ಲೆಯ 180ಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಶೀಘ್ರವೇ ಗಣಕೀಕರಣಗೊಳಿಸಲಾಗುವುದು.
ಕೆ.ಮಹೇಶ್ವರಪ್ಪ, ಉಪ ನಿರ್ದೇಶಕ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ.---
ದೇಶದಲ್ಲಿ ಅತ್ಯಧಿಕ ಸಹಕಾರ ಸಂಘಗಳಿದ್ದು, ದೇಶದ ಜಿಡಿಪಿಯಲ್ಲಿ ಶೇ.8ರಷ್ಟು ಪಾಲನ್ನು ಸಹಕಾರ ಕ್ಷೇತ್ರ ನೀಡಿದೆ. ಸಹಕಾರ ಕ್ಷೇತ್ರವು ಬಡ, ಮಧ್ಯಮ ವರ್ಗ, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ತಕ್ಷಣವೇ ಆರ್ಥಿಕ ನೆರವು ಕಲ್ಪಿಸುವ ಮೂಲಕ ಆಸರೆಯಾಗುತ್ತಿದೆ. ಜಿಲ್ಲಾ ಸಹಕಾರ ಒಕ್ಕೂಟಕ್ಕೆ ದೂಡಾದಿಂದ 4 ಸಾವಿರ ಚದರ ಅಡಿ ನಿವೇಶನ ಮಂಜೂರಾಗಿದ್ದು, ಶೀಘ್ರವೇ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು.ಆರ್.ಜಿ.ಶ್ರೀನಿವಾಸಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ
..............................