ಜೇವರ್ಗಿ- ಯಡ್ರಾಮಿ ಶಾಲೆಗಳಲ್ಲಿಲ್ಲ ದೈಹಿಕ ಶಿಕ್ಷಕರು

| Published : Aug 13 2025, 12:30 AM IST

ಜೇವರ್ಗಿ- ಯಡ್ರಾಮಿ ಶಾಲೆಗಳಲ್ಲಿಲ್ಲ ದೈಹಿಕ ಶಿಕ್ಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಬಹುಪಾಲು ಕಡೆ ಆಟದ ಮೈದಾನವಿಲ್ಲ. ಸುಸಜ್ಜಿತ ಮೈದಾನವಿದ್ದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ವಿದ್ಯಾರ್ಥಿಗಳಿಗೆ ಕ್ರೀಡಾಭ್ಯಾಸವಿಲ್ಲದೆ ಮೈ ಜಿಡ್ಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಬಾಲ್ಯದ ಆಟೋಟದ ದೈಹಿಕ ಕಸರತ್ತಿಲ್ಲದೆ ವಿದ್ಯಾರ್ಥಿಗಳು ಮಂಕಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಬಹುಪಾಲು ಕಡೆ ಆಟದ ಮೈದಾನವಿಲ್ಲ. ಸುಸಜ್ಜಿತ ಮೈದಾನವಿದ್ದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ವಿದ್ಯಾರ್ಥಿಗಳಿಗೆ ಕ್ರೀಡಾಭ್ಯಾಸವಿಲ್ಲದೆ ಮೈ ಜಿಡ್ಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಬಾಲ್ಯದ ಆಟೋಟದ ದೈಹಿಕ ಕಸರತ್ತಿಲ್ಲದೆ ವಿದ್ಯಾರ್ಥಿಗಳು ಮಂಕಾಗಿದ್ದಾರೆ.

ತಾಲೂಕಿನ 44 ಸರ್ಕಾರಿ ಪ್ರೌಢಶಾಲೆಗಳ ಪೈಕಿ 37 ಪ್ರೌಢ ಶಾಲೆಗಳಲ್ಲಿ, 82 ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ 68 ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಉಳಿದ ವಿಷಯವಾರು ಶಿಕ್ಷಕರ ಹೆಗಲಿಗೆ ದೈಹಿಕ ಶಿಕ್ಷಣ ಕಲಿಕೆಯ ಹೊರೆ ಬಿದ್ದಿದೆ. ಕೆಲ ಶಾಲೆಗಳ ಮುಖ್ಯಗುರುಗಳು ವಿಷಯವಾರು ಶಿಕ್ಷಕರನ್ನು ದೈಹಿಕ ಶಿಕ್ಷಣ ತರಗತಿಗೆ ನಿಯೋಜಿಸಲು ವಿಫಲವಾಗಿ ಮಕ್ಕಳು ಆಡಿದ್ದೇ ಆಟ ಎಂಬಂತೆ ತರಗತಿಯಿಂದ ಹೊರಗೆ ಕಳಿಸಿ ಕೈತೊಳೆದುಕೊಳ್ಳುತ್ತಾರೆ.

97 ಶಾಲೆಗಳಲ್ಲಿ ಮೈದಾನವಿಲ್ಲ: 97 ಶಾಲೆಗಳಿಗೆ ಆಟದ ಮೈದಾನ ಬೇಕು ಎಂದು ಸಾಕಷ್ಟು ಬಾರಿ ಕಂದಾಯ ಇಲಾಖೆಗೆ ಶಿಕ್ಷಣ ಇಲಾಖೆ ಮನವಿ ಮಾಡಿದೆ. ಈವರೆಗೆ ನಡೆಸಿದ ಪ್ರಯತ್ನಕ್ಕೆ ತಾಲೂಕಿನ ಕೆಲವು ಶಾಲೆಗಳಿಗೆ ಮಾತ್ರ ಮೈದಾನಕ್ಕೆ ಜಾಗ ಸಿಕ್ಕಿದೆ ಹೊರತು ಉಳಿದ ಶಾಲೆ ಸ್ಥಿತಿ ಅಧೋಗತಿಯಾಗಿದೆ.

ರಸ್ತೆ ಮೇಲೆಯೇ ಪ್ರಾರ್ಥನೆ: ಕುಳಗೇರಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಮೈದಾನ ಇಲ್ಲದ್ದರಿಂದ ಶಾಲೆ ಮುಂದಿನ ರಸ್ತೆಯಲ್ಲಿ ನಿತ್ಯದ ಪ್ರಾರ್ಥನೆ ಮಾಡಬೇಕಿದೆ. ದುರಂತವೆಂದರೆ ಪ್ರಾರ್ಥನೆ ಅರ್ಧಕ್ಕೆ ನಿಲ್ಲಿಸಿ ಊರ ದನಗಳ ಹಿಂಡು ಹೋದ ನಂತರ ಪ್ರಾರ್ಥನೆ ಮುಂದುವರಿಸಿದ ಉದಾಹರಣೆಗಳಿವೆ.

ಒಟ್ಟಾರೆಯಾಗಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕ್ರಾಫ್ಟ್ ಶಿಕ್ಷಕರಿಂದ ಪೇಂಟಿಂಗ್, ಹಾಡುಗಾರಿಕೆ, ಸಂಗೀತ, ನೃತ್ಯ, ಯೋಗ ಸೇರಿ ವಿದ್ಯಾರ್ಥಿಗಳು ಕ್ರಿಯಾತ್ಮಕ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ. ತಾಲೂಕಿನಲ್ಲಿ ದಶಕದಿಂದ ಖಾಲಿಯಿರುವ ದೈಹಿಕ ಶಿಕ್ಷಣ, ಕ್ರಾಫ್ಟ್ ಶಿಕ್ಷಕರನ್ನು ಡಿಎಂಎಫ್, ಸಿಎಸ್‌ಆ‌ರ್ ನಿಧಿಯಡಿ ಉಳಿದ ಅತಿಥಿ ಶಿಕ್ಷಕರಂತೆ ನೇಮಿಸಿಕೊಳ್ಳಲಾಗುವುದು ಎಂದು ಹೇಳುತ್ತಾ 7-8 ವರ್ಷ ಕಾಲ ತಳ್ಳಿದ್ದು ಆಡಳಿತ ವ್ಯವಸ್ಥೆಯ ಜಿಗುಟುತನಕ್ಕೆ ಸಾಕ್ಷಿಯಾಗಿದೆ.

----------

ತಾಲೂಕಿನ 7 ಸರ್ಕಾರಿ ಪ್ರೌಢ, 68 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. 97 ಹೆಚ್ಚು ಶಾಲೆಗಳಿಗೆ ಆಟದ ಮೈದಾನ ಬೇಕು ಎಂದು ಈಗಾಗಲೇ ತಾಲೂಕು ಆಡಳಿತಕ್ಕೆ ಪತ್ರ ಬರೆದಿರುವೆ. ದೈಹಿಕ ಶಿಕ್ಷಣ ಕಡೆಗಣಿಸಿರುವ ಶಾಲೆಗಳು ನಿತ್ಯ ಕ್ರೀಡಾ ತರಗತಿ ನಡೆಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಜಿಪಿಎಸ್ ಫೋಟೊ ಸಮೇತ ಇಲಾಖೆಗೆ ವರದಿ ನೀಡುವಂತೆ ಆದೇಶ ಇದೆ.

-ಶಿವಪುತ್ರ. ಎಸ್. ಬೀರಗೊಂಡ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ, ಜೇವರ್ಗಿ