ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಎಷ್ಟೋ ಬರೆಯೋಕ್ಕೂ ಬಾರದ ವಿದ್ಯಾರ್ಥಿಗಳಿದ್ದಾರೆ, ಹೊಣೆ ಯಾರು?

| Published : Sep 06 2024, 01:08 AM IST / Updated: Sep 06 2024, 12:00 PM IST

ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಎಷ್ಟೋ ಬರೆಯೋಕ್ಕೂ ಬಾರದ ವಿದ್ಯಾರ್ಥಿಗಳಿದ್ದಾರೆ, ಹೊಣೆ ಯಾರು?
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಷ್ಟೋ ವಿದ್ಯಾರ್ಥಿಗಳಿಗೆ ಕನ್ನಡ ಅಕ್ಷರಮಾಲೆ ಬರೆಯಲಿಕ್ಕೆ ಬರುತ್ತಿಲ್ಲ, ಇದಕ್ಕೆ ಯಾರು ಕಾರಣ? ಶಿಕ್ಷಕರೋ, ಪಾಲಕರೋ ಅಥವಾ ವಿದ್ಯಾರ್ಥಿಗಳೋ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೊನ್ನಾಳಿಯಲ್ಲಿ ಪ್ರಶ್ನಿಸಿದ್ದಾರೆ.

 ಹೊನ್ನಾಳಿ :  ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಷ್ಟೋ ವಿದ್ಯಾರ್ಥಿಗಳಿಗೆ ಕನ್ನಡ ಅಕ್ಷರಮಾಲೆ ಬರೆಯಲಿಕ್ಕೆ ಬರುತ್ತಿಲ್ಲ, ಇದಕ್ಕೆ ಯಾರು ಕಾರಣ? ಶಿಕ್ಷಕರೋ, ಪಾಲಕರೋ ಅಥವಾ ವಿದ್ಯಾರ್ಥಿಗಳೋ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು.

ಗುರುವಾರ ಪಟ್ಟಣದ ಪಂಚಾಚಾರ್ಯ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಡಾ. ಎಸ್. ರಾಧಾಕೃಷ್ಣನ್ ಅವರ 136 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ನಂತರದ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಆನ್‍ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರನ್ನು ಹಾಳುಮಾಡುವ ವ್ಯವಸ್ಥೆಗೆ ನಾಂದಿ ಹಾಡಿದಂತಾಗಿದೆ. 

ಇನ್ನು ಮುಂದಾದರೂ ಇದಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ಹೆಚ್ಚು ಶ್ರಮವಹಿಸಬೇಕು ಎಂದರು. ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಕುರಿತು, ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿ.ಪಂ. ಸಿಇಒ ಅವರಿಗೆ ವಚನ ಕೊಟ್ಟಿದ್ದಾರೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು. ಅದಕ್ಕಾಗಿ ಅವರು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಾಲೆಯಿಂದ ಶಾಲೆಗಳಿಗೆ ಸುತ್ತಾಡಿ ಸುಧಾರಣೆಗೆ ಕ್ರಮಕೈಗೊಳ್ಳುತ್ತಿರುವುದು ಅಭಿನಂದನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ನಾನು ಕಚೇರಿಯಲ್ಲಿ ಕೂರದೇ ಶಾಲೆಗಳಿಗೆ ಸುತ್ತಾಡಿಕೊಂಡು ಕೆಲಸ ಮಾಡುತ್ತೇನೆ. ಮೊದಲು ನಾನು ಬದಲಾಗುವ ಮೂಲಕ ನಿಮ್ಮಲ್ಲಿ ಪ್ರೇರಣೆ ಮೂಡಿಸಬೇಕಾಗಿದೆ. ಶಿಕ್ಷಕರು ತಪ್ಪು ಮಾಡಬಾರದು, ಅವರ ಮೇಲೆ ಯಾರೂ ದೂರು ಹೇಳಬಾರದು ಆ ರೀತಿಯ ಕರ್ತವ್ಯ ನಿಷ್ಠೆಯನ್ನು ಶಿಕ್ಷಕರಿಂದ ನಾನು ನಿರೀಕ್ಷೆ ಮಾಡುತ್ತೇನೆ. ಆದ್ದರಿಂದ ಶಿಕ್ಷಕರು ಸಮಯ ಪಾಲನೆ, ಆತ್ಮಗೌರವ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ಉಪನ್ಯಾಸಕ ಭೀಮಾನಾಯ್ಕ ಮಾತನಾಡಿ, ತಂದೆ ತಾಯಿ ಜೀವ ಕೊಡುತ್ತಾರೆ, ಶಿಕ್ಷಕರು ಜೀವನ ಕೊಡುತ್ತಾರೆ, ಪ್ರಶ್ನೆ ಕೇಳುವಂತಹ ಮಕ್ಕಳನ್ನು ಶಿಕ್ಷಕರು ರೂಪಿಸಬೇಕು ಎಂದು ಹೇಳಿದರು.ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಮಾತನಾಡಿದರು. 2023-24 ನೇ ಸಾಲಿನ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಸಂತೋಷ್, ಪ್ರಾ.ಶಾ.ಶಿ ಸಂಘದ ಅಧ್ಯಕ್ಷೆ ಗೀತಾ, ಪ್ರೌ.ಶಾ.ಸ.ಶಿ ಸಂಘದ ಅಧ್ಯಕ್ಷ ರವಿಗೌಡ, ಉರ್ದು ಶಾ.ಶಿ ಸಂಘದ ಅಧ್ಯಕ್ಷ ಅಖಿಲ್ ಪಾಷಾ, ನೌಕರರ ಗೃಹನಿರ್ಮಾಣ ಮಂಡಳಿ ಅಧ್ಯಕ್ಷ ಅರುಣ್, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಷಹಜಾನ್ ಸೇರಿದಂತೆ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು .