ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ಐದಾರು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಸೋಮವಾರ ಬಿಜಕಲ್ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಕುಡಿಯುವ ನೀರಿಗಾಗಿ ಕೊಡ ಹಿಡಿದು ದೂರದ ಕೆರೆ, ತೋಟದ ಮನೆಗಳತ್ತ ತೆರಳುವ ಪರಿಸ್ಥಿತಿ ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ನಿರ್ಮಾಣವಾಗಿದೆ.ಗ್ರಾಮದಲ್ಲಿ ಐದಾರು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಸೋಮವಾರ ಬಿಜಕಲ್ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಈ ಟೆಂಗುಂಟಿ ಗ್ರಾಮದಲ್ಲಿ 1500ಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮಕ್ಕೆ ನೀರು ಪೂರೈಸಲು ಎರಡು ಕೊಳವೆಬಾವಿಗಳಿವೆ. ಈ ಪೈಕಿ ಒಂದು ಕೊಳವೆಬಾವಿ ಬಹುದಿನಗಳಿಂದ ಕೆಟ್ಟಿದೆ. ಇನ್ನೊಂದು ಕೊಳವೆಬಾವಿಯ ಮೋಟಾರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಐದಾರು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.ಇದರ ಜತೆಗೆ ಜಲಜೀವನ್ ಮಿಷನ್ ಯೋಜನೆಯ ನಲ್ಲಿಗಳಲ್ಲಿಯೂ ನೀರು ಬರುತ್ತಿಲ್ಲ. ಹೀಗಾಗಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾಗಿದೆ. ಮಹಿಳೆಯರು ಮತ್ತು ಮಕ್ಕಳು ಕೂಡ ನೀರು ತರುವ ಕೆಲಸಕ್ಕೆ ಹೋಗುವಂತಾಗಿದೆ.
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ನೀರಿನ ಸಮಸ್ಯೆ ಆರಂಭವಾದ ಬಳಿಕ ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ತಕ್ಷಣ ನೀರು ಪೂರೈಸಬೇಕು ಅಥವಾ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ತೆರಳಿ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ವಿಷಯ ತಿಳಿದು ಸ್ಥಳಕ್ಕೆ ಬಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಮಳಿಮಠ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಮೋಟಾರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಮಧ್ಯಾಹ್ನದೊಳಗೆ ದುರಸ್ತಿ ಪೂರ್ಣಗೊಳಿಸಿ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು. ದುರಸ್ತಿಯಲ್ಲಿರುವ ಮತ್ತೊಂದು ಕೊಳವೆಬಾವಿಯಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಜಲಜೀವನ್ ಮಿಷನ್ ನೀರು ಪೂರೈಕೆಯ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ಭರವಸೆ ಬಳಿಕ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಹಾಕಿದ್ದ ಬೀಗವನ್ನು ತೆಗೆದು ಪ್ರತಿಭಟನೆ ಹಿಂಪಡೆದರು.ಶಾಶ್ವತ ಪರಿಹಾರಕ್ಕೆ ಆಗ್ರಹ: ಟೆಂಗುಂಟಿ ಗ್ರಾಮದಲ್ಲಿ ಮತ್ತೆ ನೀರಿನ ಸಮಸ್ಯೆ ಎದುರಾಗದಂತೆ ಎರಡೂ ಕೊಳವೆಬಾವಿಗಳನ್ನು ದುರಸ್ತಿ ಮಾಡಿ ಸಿದ್ಧವಾಗಿಡಬೇಕು. ಜಲಜೀವನ್ ಮಿಷನ್ ಮೂಲಕವೂ ನಿರಂತರ ನೀರು ಪೂರೈಸಬೇಕು. ತುರ್ತು ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ದೊಡ್ಡಪ್ಪ ಕೌದಿ, ದುರ್ಗಪ್ಪ ಆರ್. ಮಾದರ್, ಹನುಮಂತಪ್ಪ ಮಾದರ್, ಪ್ರಭುಗೌಡ ಪಾಟೀಲ್, ಮಂಜುನಾಥ ಅಬ್ಬಿಗೇರಿ, ದೊಡ್ಡಪ್ಪ ಹಡಪದ, ರುದ್ರಗೌಡ ಮೇಟಿ, ಭೀಮಪ್ಪ ಕಂಬಳಿ, ಕುಮಾರಪ್ಪ ಹೊಸೂರು, ಅಶೋಕ ಅಬ್ಬಿಗೇರಿ, ಭರಮಗೌಡ ಮೇಟಿ, ಮಲ್ಲಪ್ಪ, ಅನೇಕರು ಇದ್ದರು.ನೀರು ಒದಗಿಸುವ ಕೆಲಸ ಮಾಡಿ: ನಮ್ಮ ಟೆಂಗುಂಟಿ ಗ್ರಾಮದಲ್ಲಿ ಕಳೆದ ಆರು ದಿನಗಳಿಂದ ನೀರು ಇದ್ದಿರಲಿಲ್ಲ. ಪಿಡಿಒ ಅವರಿಗೆ ಹೇಳಿ ಸಾಕಾಗಿತ್ತು. ಸೋಮವಾರ ಗ್ರಾಮಸ್ಥರೊಂದಿಗೆ ಗ್ರಾಪಂಗೆ ಮುತ್ತಿಗೆ ಹಾಕಿ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು. ಪಿಡಿಒ ಮಳಿಮಠ ಅವರು ಒಂದು ಬೋರ್‌ವೆಲ್ ಆರಂಭ ಮಾಡಿಸಿದ್ದು, ಇನ್ನೊಂದು ಬೋರ್‌ವೆಲ್ ಆರಂಭ ಮಾಡಿಸಬೇಕು. ಜತೆಗೆ ಜೆಜೆಎಂ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಟೆಂಗುಂಟಿ ಗ್ರಾಮಸ್ಥ ಪ್ರಭುಗೌಡ ಪಾಟೀಲ್ ಹೇಳಿದರು.