ಕೆಆರ್‌ಎಸ್ ಅಣೆಕಟ್ಟೆಯಲ್ಲಿ 2.002 ಟಿಎಂಸಿ ಹೂಳು ಇದೆ: ಡಿ.ಕೆ.ಶಿವಕುಮಾರ್

| Published : Aug 19 2025, 01:00 AM IST

ಕೆಆರ್‌ಎಸ್ ಅಣೆಕಟ್ಟೆಯಲ್ಲಿ 2.002 ಟಿಎಂಸಿ ಹೂಳು ಇದೆ: ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಿಗಮ ವ್ಯಾಪ್ತಿಯ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ವಾಟೆಹೊಳೆ ಹಾಗೂ ಮಾರ್ಕೋನಹಳ್ಳಿ ಜಲಾಶಯಗಳ ಹೂಳಿನ ಪ್ರಮಾಣ ಅಳೆಯಲು ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯ ಕೈಗೊಳ್ಳಲಾಗಿರುತ್ತದೆ. ಬ್ಯಾತಿಮೆಟ್ರಿ (Bathymetry) ಎಂಬ ವಿಧಾನದ ಬಳಕೆಯಿಂದ ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯವನ್ನು ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರದ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದಿಂದ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್‌ಎನ್‌ಎಲ್) ವ್ಯಾಪ್ತಿಯ ಜಲಾಶಯಗಳಲ್ಲಿ ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯ ಕೈಗೊಂಡು ಹೂಳಿನ ಪರಿಮಾಣವನ್ನು ಅಳೆಯಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರು, ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಡಿಸಿಎಂ, ನಿಗಮ ವ್ಯಾಪ್ತಿಯ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ವಾಟೆಹೊಳೆ ಹಾಗೂ ಮಾರ್ಕೋನಹಳ್ಳಿ ಜಲಾಶಯಗಳ ಹೂಳಿನ ಪ್ರಮಾಣ ಅಳೆಯಲು ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯ ಕೈಗೊಳ್ಳಲಾಗಿರುತ್ತದೆ ಎಂದಿದ್ದಾರೆ.

ಬ್ಯಾತಿಮೆಟ್ರಿ (Bathymetry) ಎಂಬ ವಿಧಾನದ ಬಳಕೆಯಿಂದ ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯವನ್ನು ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರದ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದಿಂದ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದರಿಂದ ಜಲಾಶಯಗಳಲ್ಲಿನ ಪ್ರಸ್ತುತ ಹಾಗೂ ಮೊದಲನೇ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಕಂಡುಬರುವ ವ್ಯತ್ಯಾಸದಿಂದ ಶೇಖರಣೆಗೊಂಡ ಹೂಳಿನ ಪ್ರಮಾಣ ಲೆಕ್ಕಿಸಬಹುದಾಗಿರುತ್ತದೆ ಎಂದು ವಿವರಿಸಿದ್ದಾರೆ.

ಯಾವ ಜಲಾಶಯ, ಎಷ್ಟು ಹೂಳು?

ಕೃಷ್ಣರಾಜಸಾಗರ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 49.431 ಟಿ.ಎಂ.ಸಿ ಇದೆ. 2022ರಲ್ಲಿ ಸರ್ವೇ ಕೈಗೊಳ್ಳಲಾಗಿದ್ದು, 2.002 ಟಿಎಂಸಿ ಸಂಚಿತ ಹೂಳು ಪ್ರಮಾಣ ಇರುವುದು ದಾಖಲಾಗಿದೆ.

ಕಬಿನಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 19.508 ಟಿ.ಎಂ.ಸಿ ಇದೆ. 2022ರಲ್ಲಿ ಸರ್ವೇ ಕೈಗೊಳ್ಳಲಾಗಿದ್ದು 1.031 ಟಿಎಂಸಿ ಸಂಚಿತ ಹೂಳು ಪ್ರಮಾಣ ಇದೆ, ಹಾರಂಗಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 8.496 ಟಿ.ಎಂ.ಸಿ ಇದೆ. 2019ರಲ್ಲಿ ಸರ್ವೇ ಕೈಗೊಳ್ಳಲಾಗಿದ್ದು, 1.233 ಟಿಎಂಸಿ ಸಂಚಿತ ಹೂಳು ಪ್ರಮಾಣ ಇದೆ.

ಹೇಮಾವತಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 37.087 ಟಿಎಂಸಿ ಇದೆ. 2009ರಲ್ಲಿ ಸರ್ವೇ ಕೈಗೊಳ್ಳಲಾಗಿದೆ. 2.687 ಟಿಎಂಸಿ ಸಂಚಿತ ಹೂಳು ಪ್ರಮಾಣ ಇದೆ. ವಾಟೆಹೊಳೆ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 1.510 ಟಿ.ಎಂ.ಸಿ ಇದೆ. 2011ರಲ್ಲಿ ಸರ್ವೆ ಕೈಗೊಳ್ಳಲಾಗಿದ್ದು 0.235 ಟಿಎಂಸಿ ಸಂಚಿತ ಹೂಳು ಪ್ರಮಾಣ ಇದೆ. ಮಾರ್ಕೋನಹಳ್ಳಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 2.401 ಟಿ.ಎಂ.ಸಿ ಇದೆ. 2011ರಲ್ಲಿ ಸರ್ವೇ ಕೈಗೊಳ್ಳಲಾಗಿದ್ದು 0.136 ಟಿಎಂಸಿ ಸಂಚಿತ ಹೂಳು ಪ್ರಮಾಣ ಇದೆ.