ಬಸ್‌ ನಿಲ್ದಾಣವಿದೆ ಆದ್ರೆ ಬಸ್‌ ಬರಲ್ಲ !

| Published : Jul 11 2025, 01:47 AM IST

ಸಾರಾಂಶ

ಬಸ್ ನಿಲ್ದಾಣಗಳನ್ನು ತೆರೆಯುವುದು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಆದರೆ ತಾಲೂಕಿನ ಹೋಬಳಿ ಕೇಂದ್ರವಾದ ನೊಣವಿನಕೆರೆಯಲ್ಲಿ ಸರ್ಕಾರ ಲಕ್ಷಾಂತರ ರು. ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಿದ್ದರೂ ಪ್ರಯೋಜನಕ್ಕೆ ಬಾರದಂತಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಿ. ರಂಗಸ್ವಾಮಿ, ತಿಪಟೂರು

ಬಸ್ ನಿಲ್ದಾಣಗಳನ್ನು ತೆರೆಯುವುದು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಆದರೆ ತಾಲೂಕಿನ ಹೋಬಳಿ ಕೇಂದ್ರವಾದ ನೊಣವಿನಕೆರೆಯಲ್ಲಿ ಸರ್ಕಾರ ಲಕ್ಷಾಂತರ ರು. ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಿದ್ದರೂ ಪ್ರಯೋಜನಕ್ಕೆ ಬಾರದಂತಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ನೊಣವಿನಕೆರೆ ದೇವಸ್ಥಾನ, ಆಸ್ಪತ್ರೆ, ಶಾಲಾ ಕಾಲೇಜು, ಪೋಲೀಸ್ ಠಾಣೆ ಸೇರಿದಂತೆ ವ್ಯಾಪಾರ ಕೇಂದ್ರವಾಗಿದ್ದು ಇಲ್ಲಿನ ಪ್ರತಿ ಬುಧವಾರ ಸಂತೆಯೂ ನಡೆಯುತ್ತದೆ. ಇಲ್ಲಿಗೆ ಸುತ್ತಮುತ್ತಲ ಗ್ರಾಮೀಣರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ಹೋಗುತ್ತಾರೆ. ಇಲ್ಲಿ 2011ರಲ್ಲಿ ಬಸ್ ನಿಲ್ದಾಣವನ್ನು ಸರ್ಕಾರದಿಂದ ನಿರ್ಮಾಣ ಮಾಡಲಾಗಿತ್ತು. ಆದರೆ ಇದು ಕೆಲವು ವರ್ಷಗಳ ನಂತರ ಸಾರ್ವಜನಿಕ ಉಪಯೋಗಕ್ಕೆ ಬಾರದಂತಾಗಿ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ನಂತರ ಸ್ಥಳೀಯ ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್ ನಿಲ್ದಾಣವಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ರಸ್ತೆತಡೆ ಮಾಡಿ ಪ್ರತಿಭಟನೆ ಮಾಡಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ನಿಲ್ದಾಣದ ನಿರ್ವಹಣೆಗೆ ಮುಂದಾದರು. ಆಗ ಸಂಚಾರ ನಿಯಂತ್ರಕರು ನಿಯೋಜಿಸಿ ಬಸ್‌ಗಳು ನಿಲ್ದಾಣದ ಒಳಗಿ ಹೋಗಿ ಬರುತ್ತಿದ್ದವು ಆದರೆ ಕೆಲ ತಿಂಗಳ ಬಳಿಕ ಸಂಚಾರ ನಿಯಂತ್ರಕರ ನಿಯೋಜನೆ ಇಲ್ಲದ ಕಾರಣ ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ತುರುವೇಕೆರೆ ಮಾರ್ಗವಾಗಿ ಬೆಂಗಳೂರು, ಮೈಸೂರು, ತಿಪಟೂರು ಮಾರ್ಗವಾಗಿ ಶಿವಮೊಗ್ಗ, ಹಾಸನ, ಅರಸೀಕೆರೆ ತೆರಳುತ್ತಾರೆ. ಈ ಊರುಗಳಿಗೆ ಸಂಚರಿಸುವ ಬಸ್‌ಗಳು ಬಸ್ ನಿಲ್ದಾಣದ ಒಳಗೆ ಬಾರದ ಕಾರಣ ಜನರು ಬಿಸಿಲು, ಮಳೆ ಲೆಕ್ಕಿಸದೆ ರಸ್ತೆಯ ದಡದಲ್ಲಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಗಂಟೆ ಗಟ್ಟಲೆ ಕಾಯುತ್ತಿದ್ದರೂ ಬಸ್ ಚಾಲಕರು ಪ್ರಯಾಣಿಕರನ್ನು ನೋಡಿದರೂ ಬಸ್ ನಿಲ್ಲಿಸದೆ ಹಾಗೆ ಹೋಗುತ್ತಾರೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಮಕ್ಕಳು, ವಯಸ್ಸಾದವರನ್ನು ಬಸ್‌ಗೆ ಹತ್ತಿಸಿಕೊಂಡು ಹೋಗುವುದೇ ಕಷ್ಟಕರವಾಗುತ್ತಿದೆ. ವೈ.ಟಿ. ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಅಪಘಾತಗಳು ಸಂಭವಿಸುತ್ತಿರುವ ಕಾರಣ ಇಲ್ಲಿನ ಪ್ರಯಾಣಿಕರು ಎಲ್ಲಾ ಸೌಲಭ್ಯವಿದ್ದರೂ ಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕೂಡಲೆ ನಿಲ್ದಾಣಕ್ಕೆ ಬಸ್ ಹೋಗಿ ಬರುವ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಕೋಟ್ : ಸರ್ಕಾರ ಲಕ್ಷಾಂತರ ರೂ ಹಣ ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಿಸಿರುವುದು ಪ್ರಯೋಜನಕ್ಕೆ ಬರುತ್ತಿಲ್ಲ. ನಿಲ್ದಾಣದ ಸುತ್ತಮುತ್ತ ಕಸದ ರಾಶಿ, ಅನಪೇಕ್ಷಿತ ಗಿಡಗಳು ಬೆಳೆದುಕೊಂಡಿದ್ದು ಗಬ್ಬುನಾರುತ್ತಿದೆ. ಇಲ್ಲಿನ ಶೌಚಗೃಹ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಿಲ್ದಾಣದ ನಿರ್ವಹಣೆಯನ್ನು ಯಾರು ಮಾಡುತ್ತಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನಿಲ್ದಾಣಕ್ಕೆ ನಿಯಂತ್ರಕ ಹಾಗೂ ಸಿಬ್ಬಂದಿಯನ್ನು ನೇಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು.

- ತಿಮ್ಮೇಗೌಡರು ಮಾದಿಹಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು.ಕೋಟ್‌..2

ಹೋಬಳಿ ಕೇಂದ್ರವಾದ ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ತಿಪಟೂರು ಸೇರಿದಂತೆ ಅನೇಕ ಕಡೆ ಪ್ರಯಾಣ ಬೆಳೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಕಾಡ ಸಿದ್ಧೇಶ್ವರ ಮಠ ಹಾಗೂ ಕೋಡಿಕೇರೆ ರಂಗಾಪುರ ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅವರು ತಾಲೂಕು ಕೇಂದ್ರವನ್ನು ತಲುಪಲು ಬಸ್‌ ನಿಲ್ದಾಣದಲ್ಲಿ ಕಾಯಲು ಹಿಂಜರಿಕೆ ಪಡುವಂತಾಗಿದೆ. ಆದ್ದರಿಂದ ಈ ಕೂಡಲೇ ಬಸ್‌ ನಿಲ್ದಾಣವನ್ನು ವ್ಯವಸ್ಥಿತ ರೀತಿಯಲ್ಲಿ ಬಳಸಿಕೊಳ್ಳಲು ಅನುಕೂಲ ಕಲ್ಪಿಸಬೇಕು - ರಾಜು, ಚನ್ನಯ್ಯ ನೊಣವಿನಕೆರೆ.

---------

ಫೋಟೋ 9-ಟಿಪಿಟಿ5ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಬಸ್ ನಿಲ್ದಾಣವಿದ್ದರೂ ಪ್ರಯಾಣಿಕರನ್ನು ವೈ.ಟಿ. ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿ ಹತ್ತಿಸಿಕೊಳ್ಳುತ್ತಿರುವುದು.ಫೋಟೋ: ಯಾವುದೇ ಬಸ್‌ ಗಳು ನಿಲ್ದಾಣದ ಒಳಗೆ ಬರದೆ ಇರುವುದರಿಂದ ಖಾಲಿಯಾಗಿರುವ ಬಸ್‌ ನಿಲ್ದಾಣ