ಬಿಡದಿ ಪುರಸಭೆ ಅಧ್ಯಕ್ಷರನ್ನು ಕೆಳಗಿಳಿಸಲು ಜೆಡಿಎಸ್‌ನೊಳಗೆ ಹುನ್ನಾರ

| Published : Jul 31 2025, 12:45 AM IST

ಬಿಡದಿ ಪುರಸಭೆ ಅಧ್ಯಕ್ಷರನ್ನು ಕೆಳಗಿಳಿಸಲು ಜೆಡಿಎಸ್‌ನೊಳಗೆ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಡದಿ ಪುರಸಭೆಯಲ್ಲಿ ಅಧ್ಯಕ್ಷರಾಗಿರುವ ಜೆಡಿಎಸ್‌ನ ಹರಿಪ್ರಸಾದ್ ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಜೆಡಿಎಸ್ ಪಾಳಿಯದಲ್ಲಿಯೇ ಬಿರುಸಿನ ಚಟುವಟಿಕೆಗಳು ನಡೆದಿವೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪಕ್ಷಬೇಧ ಮರೆತು ವಿಪಕ್ಷದವರ ಜೊತೆಗೂಡಿ ಶ್ರಮಿಸುತ್ತಿರುವ ಆಡಳಿತರೂಢ ಪುರಸಭೆ ಅಧ್ಯಕ್ಷರ ಕಾರ್ಯವೈಖರಿ ಜೆಡಿಎಸ್ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಿದೆ.ಸಾಮಾನ್ಯವಾಗಿ ಅಧ್ಯಕ್ಷ - ಉಪಾಧ್ಯಕ್ಷರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷದವರು ಹುನ್ನಾರ ನಡೆಸುವುದು ವಾಡಿಕೆ. ಆದರೆ, ಬಿಡದಿ ಪುರಸಭೆಯಲ್ಲಿ ಅಧ್ಯಕ್ಷರಾಗಿರುವ ಜೆಡಿಎಸ್‌ನ ಹರಿಪ್ರಸಾದ್ ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಜೆಡಿಎಸ್ ಪಾಳಿಯದಲ್ಲಿಯೇ ಬಿರುಸಿನ ಚಟುವಟಿಕೆಗಳು ನಡೆದಿವೆ.ಇದಕ್ಕೆ ಅಧ್ಯಕ್ಷ ಹರಿಪ್ರಸಾದ್ ಅವರು ಬಿಡದಿ ಪಟ್ಟಣದ ಅಭಿವೃದ್ಧಿ ಉದ್ದೇಶದಿಂದ ಶಾಸಕ ಬಾಲಕೃಷ್ಣ, ಪುರಸಭೆ ವಿಪಕ್ಷ ನಾಯಕ ಸಿ. ಉಮೇಶ್ ಹಾಗೂ ಎಲ್ಲ ಸದಸ್ಯರೊಂದಿಗೆ ಪಕ್ಷಾತೀತವಾಗಿ ಗುರುತಿಸಿಕೊಂಡಿರುವುದು. ಅದರಲ್ಲೂ ಹರಿಪ್ರಸಾದ್ ಮತ್ತು ಸಿ.ಉಮೇಶ್ ಜೋಡೆತ್ತುಗಳಂತೆ ಮುಂದೆ ನಿಂತು ಕೆಲಸ ಮಾಡುತ್ತಿರುವುದು ಕಾರಣವಾಗಿದೆ.

ಜೆಡಿಎಸ್ ಮಾಜಿ ಶಾಸಕರ ತೀವ್ರ ವಿರೋಧದ ನಡುವೆಯೂ ಬಿಡದಿ ಪಟ್ಟಣದಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದು ಹಾಗೂ ಪುರಸಭೆ ನಿಧಿ ಮತ್ತು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಎಲ್ಲ ವಾರ್ಡುಗಳಲ್ಲಿ ಸುಮಾರು 22 ಕೋಟಿ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆತು ಪ್ರಗತಿಯಲ್ಲಿವೆ. ಈ ಬಗ್ಗೆ ಜೆಡಿಎಸ್ ಕೆಲ ಸದಸ್ಯರು ಪಕ್ಷದ ಮುಖಂಡರ ಜೊತೆ ಸೇರಿ ಅಧ್ಯಕ್ಷ ಹರಿಪ್ರಸಾದ್ ವಿರುದ್ಧ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.ರಾಜೀನಾಮೆಗೆ ದಳಪತಿಗಳ ಸೂಚನೆ:ಇದನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ನಾಯಕರು, ಹರಿಪ್ರಸಾದ್ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆಯನ್ನೂ ನೀಡಿದ್ದಾರೆ. ಈ ವಿಚಾರವಾಗಿ ಈಗಾಗಲೇ ಪುರಸಭೆ ಜೆಡಿಎಸ್ ಸದಸ್ಯರು ಮತ್ತು ಮುಖಂಡರು ಮೂರು - ನಾಲ್ಕು ಸುತ್ತಿನ ಸಭೆಗಳು ನಡೆಸಿದ್ದಾರೆ. ಹರಿಪ್ರಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದನ್ನು ಸದಸ್ಯರಿಗಿಂತ ಹೆಚ್ಚಾಗಿ ಪಕ್ಷದ ಮುಖಂಡರೇ ಸವಾಲಾಗಿ ಸ್ವೀಕಾರ ಮಾಡಿದಂತಿದೆ.

ಪುರಸಭೆಯ ಮೊದಲ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಜೊತೆಗೆ 20ನೇ ವಾರ್ಡ್ ನ ಯಲ್ಲಮ್ಮ, 22ನೇ ವಾರ್ಡಿನ ಭಾನುಪ್ರಿಯ ಆಕಾಂಕ್ಷಿಯಾಗಿದ್ದರು. ಕಳೆದ 22 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಾಗಿ ಶ್ರಮಿಸಿದ್ದ ಹರಿಪ್ರಸಾದ್ ಅವರ ಸೇವೆಯನ್ನು ಗುರುತಿಸಿ ವರಿಷ್ಠರು ಅಧ್ಯಕ್ಷ ಸ್ಥಾನ ಕಲ್ಪಿಸಿದ್ದರು.

ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಅಧಿಕಾರ ಹಂಚಿಕೆ ಒಡಂಬಡಿಕೆ ಏನೂ ನಡೆದಿರಲಿಲ್ಲ. ಹರಿಪ್ರಸಾದ್ ಅವರು ಅಧ್ಯಕ್ಷರಾಗಿ (2024ರ ಸೆಪ್ಟೆಂಬರ್) ಆಯ್ಕೆಯಾಗಿ 10 ತಿಂಗಳಷ್ಟೇ ಕಳೆದಿದ್ದು, ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆದರೀಗ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದಿರುವ ಜೆಡಿಎಸ್ ವರಿಷ್ಠರು ಮಹಿಳೆಗೆ ಅವಕಾಶ ನೀಡಬೇಕೆಂಬ ನೆಪವೊಡ್ಡಿ ಹರಿಪ್ರಸಾದ್‌ಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹರಿಪ್ರಸಾದ್ ಬೆನ್ನಿಗೆ ಕೈ ಪಾಳಯ:

ಅಧ್ಯಕ್ಷ ಹರಿಪ್ರಸಾದ್ ಅವರಿಗೆ ಬಹುತೇಕ ಜೆಡಿಎಸ್ ಸದಸ್ಯರ ಜೊತೆಗೆ ಕಾಂಗ್ರೆಸ್ ಸದಸ್ಯರ ಸಂಪೂರ್ಣ ಬೆಂಬಲ ಇದೆ. ಹಾಗೊಂದು ವೇಳೆ ಜೆಡಿಎಸ್ ವರಿಷ್ಠರು ಹರಿಪ್ರಸಾದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಅಥವಾ ಬಲವಂತವಾಗಿ ರಾಜೀನಾಮೆ ಕೊಡಿಸಿದರೆ ಪುರಸಭೆ ಆಡಳಿತ ಕೈ ಬದಲಾದರು ಅಚ್ಚರಿ ಪಡಬೇಕಾಗಿಲ್ಲ. ಇದು ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು.

ಬಿಡದಿ ಪುರಸಭೆಯ 23 ಸದಸ್ಯರ ಪೈಕಿ ಜೆಡಿಎಸ್ - 14 ಮತ್ತು ಕಾಂಗ್ರೆಸ್ - 9 ಸದಸ್ಯರನ್ನು ಹೊಂದಿದೆ. ಇನ್ನು ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ವೇಳೆಗೆ 14 ಸದಸ್ಯರು ಜೆಡಿಎಸ್ , ಸಂಸದ .ಸಿ.ಎನ್.ಮಂಜುನಾಥ್ ಅವರ ಒಂದು ಮತ ಸೇರಿ ಒಟ್ಟು 15 ಮತಗಳಾಗಲಿವೆ. ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ 9 ಸದಸ್ಯರ ಜೊತೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಒಂದು ಮತ ಸೇರಿದರೆ ಒಟ್ಟು 10 ಮತಗಳಾಗುತ್ತವೆ.

ಈ ಲೆಕ್ಕಾಚಾರದಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸುವವರಿಗೆ 13 ಮತಗಳು ಬೇಕಾಗುತ್ತವೆ. ಅಧ್ಯಕ್ಷ ಹರಿಪ್ರಸಾದ್ ರಾಜೀನಾಮೆ ನೀಡಿದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ನಲ್ಲಿ ಬಂಡಾಯ ಸಾರುವ ಸದಸ್ಯರ ಬೆಂಬಲ ಪಡೆದು ಸುಲಭವಾಗಿ ಅಧಿಕಾರ ಹಿಡಿಯುವ ಉಮೇದಿನಲ್ಲಿದ್ದಾರೆ. ಹೀಗಾಗಿ ಜೆಡಿಎಸ್ ವರಿಷ್ಠರು ಅಧ್ಯಕ್ಷರ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಕುತೂಹಲ ಹೆಚ್ಚಿಸಿದೆ....ಕೋಟ್ ...

ಜೆಡಿಎಸ್ ನಾಯಕರ ಮಾರ್ಗದರ್ಶನ, ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹಾಗೂ ಪುರಸಭೆಯ ಜೆಡಿಎಸ್ - ಕಾಂಗ್ರೆಸ್ ಸದಸ್ಯರು ಸಂಪೂರ್ಣ ಸಹಕಾರದಲ್ಲಿ ಬಿಡದಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಎಲ್ಲ ಸದಸ್ಯರು ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ರಾಜೀನಾಮೆಗೆ ಯಾರು ಒತ್ತಾಯಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ.

- ಹರಿಪ್ರಸಾದ್ , ಅಧ್ಯಕ್ಷರು, ಬಿಡದಿ ಪುರಸಭೆ....ಕೋಟ್ ...

ಬಿಡದಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಅವರಿಗೆ ಶಾಸಕ ಬಾಲಕೃಷ್ಣ ಹಾಗೂ ವಿರೋಧ ಪಕ್ಷದವರ ಸಂಪೂರ್ಣ ಬೆಂಬಲ ಇದೆ. ಉಳಿದ ಅವಧಿವರೆಗೂ ಹರಿಪ್ರಸಾದ್ ಅವರೇ ಅಧ್ಯಕ್ಷರಾಗಿ ಮುಂದುವರೆದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಹೀಗಾಗಿ ನಮ್ಮ ಬೆಂಬಲ ಅವರಿಗಿರಲಿದೆ. ಈಗ ಜೆಡಿಎಸ್ ನಾಯಕರು ರಾಜಕೀಯ ಮಾಡುವುದು ಬೇಡ.- ಸಿ.ಉಮೇಶ್ , ವಿಪಕ್ಷ ನಾಯಕರು, ಬಿಡದಿ ಪುರಸಭೆ.30ಕೆಆರ್ ಎಂಎನ್ 1,2.3.ಜೆಪಿಜಿ

1.ಬಿಡದಿ ಪುರಸಭೆ ಕಚೇರಿ

2.ಹರಿಪ್ರಸಾದ್ , ಅಧ್ಯಕ್ಷರು, ಬಿಡದಿ ಪುರಸಭೆ

3.ಸಿ.ಉಮೇಶ್ , ವಿಪಕ್ಷ ನಾಯಕರು, ಬಿಡದಿ ಪುರಸಭೆ