ಸಾರಾಂಶ
ಕಾರ್ಕಳ : ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ಎಮ್ಮೆ ಚರ್ಮದ ಸರ್ಕಾರ. ಅದಕ್ಕೆ ಸಂವೇದನಾಶೀಲತೆ ಇಲ್ಲದೆ ಭಂಡತನ ತೋರಿಸುತ್ತಿದೆ. ರಾಜ್ಯದಲ್ಲಿ 22 ಲಕ್ಷ ರೇಷನ್ ಕಾರ್ಡ್‌ಗಳನ್ನು ಹಾಗೂ 12 ಲಕ್ಷ ಬಗರ್ ಹುಕುಂ ಜಮೀನು ತಿರಸ್ಕಾರ ಮಾಡಲು ಹೊರಟಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ತಾಲೂಕು ಕಚೇರಿ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಆರ್ಭಟ ಹೆಚ್ಚುತ್ತಿದೆ. ಮೈಕ್ರೋ ಫೈನಾನ್ಸ್‌ಗೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ರಾಜ್ಯದಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಯುವಕರಿಗೆ ಉದ್ಯೋಗ ನೀಡುವುದರಲ್ಲಿ ವಿಫಲವಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಯಾವುದೇ ವಸ್ತುಗಳು ಸಿಗುತ್ತಿಲ್ಲ ಎಂದರು.
ರಾಜ್ಯದ ಎಲ್ಲ ಸಚಿವರು ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನ ಕಾರ್ಯಕರ್ತರು ಸರ್ಕಾರಿ ಕಚೇರಿಗಳಲ್ಲಿ ಬ್ರೋಕರ್‌ಗಳಾಗಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿಟ್ ಕಾಯಿನ್ ಹಗರಣದಲ್ಲಿ ಸಿಲುಕಿದ್ದರೂ ಆರಂಭದಲ್ಲೇ ತೀವ್ರ ವಿಚಾರಣೆ ಮಾಡದೆ ಇರುವುದಕ್ಕೆ ಕಾರಣ ಏನು? ಈ ಹಣ ಚುನಾವಣೆಗೆ, ಹೈಕಮಾಂಡ್‌ಗೆ ಹೋಗಿದೆ ಎಂಬ ಕಾರಣಕ್ಕೆ ಸಾಫ್ಟ್ ಕಾರ್ನರ್ ತೋರಲಾಗಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆ ಹಣ ದೆಹಲಿ ಚುನಾವಣೆ, ಮಹಾರಾಷ್ಟ್ರ ಚುನಾವಣೆ, ಕೇಂದ್ರದ ಚುನಾವಣೆಗೆ ರವಾನೆಯಾಗಿದೆ. ಈ ಕಾರಣಕ್ಕೆ ತನಿಖೆಯನ್ನು ಬಹಳ ಮಂದಗತಿಯಲ್ಲಿ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ 60 ಪರ್ಸೆಂಟ್ ಸರ್ಕಾರವಾಗಿದೆ ಎಂದು ಹೇಳಿದರು.
ಕಾರ್ಕಳದಲ್ಲಿ ಆರಂಭವಾದ ಈ ಪ್ರತಿಭಟನೆ ಉಡುಪಿ ಜಿಲ್ಲೆ ವ್ಯಾಪಿಸಿ ಬಳಿಕ ಬೀದರ್ ತನಕ ಹೋರಾಟಗಳು ನಡೆಯಲಿವೆ ಎಂದರು.
ರಾಜ್ಯಯ ಬಿಜೆಪಿಯ ಆಂತರಿಕ ವಿಚಾರದ ಬಗ್ಗೆ ಮಾತನಾಡಿದ ವಿ.ಸುನಿಲ್ ಕುಮಾರ್, ಪಕ್ಷದ ಆಂತರಿಕ ವಿಚಾರ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ನಾನು ಯಾವುದೇ ಬಣದಲ್ಲಿಲ್ಲ, ನಾಗ ಬನದಲ್ಲಿದ್ದೇನೆ. ಹೈಕಮಾಂಡ್ ಹೇಳಿದಂತೆ, ಪಕ್ಷ ಹೇಳಿದಂತೆ ಕೇಳುವವನು ನಾನು. ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೇನೆ. ಹೈಕಮಾಂಡ್ ಸೂಚನೆಗೆ ಬದ್ಧನಾಗಿದ್ದೇನೆ. ಪಕ್ಷದ ಒಳಗಿನ ಸಮಸ್ಯೆ ಸರಿಪಡಿಸಲು ಕಾರ್ಯಕರ್ತನಾಗಿ, ಶಾಸಕನಾಗಿ, ಪದಾಧಿಕಾರಿಯಾಗಿ ಆಂತರಿಕವಾಗಿ ಮಾಡುತ್ತೇವೆ. ಮಾಧ್ಯಮದಲ್ಲಿ ಮಾತ್ರ ರಾಜ್ಯಾಧ್ಯಕ್ಷರ ಚುನಾವಣೆ ಚರ್ಚೆಯಾಗುತ್ತಿದೆ. ಪಕ್ಷದ ಒಳಗೆ ಇಂತಹ ಯಾವುದೇ ಚರ್ಚೆಗಳು ಇಲ್ಲ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))