ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪುರಾತನ ನೃತ್ಯ ಪ್ರಕಾರವಾದ ಭರತನಾಟ್ಯ ಇತ್ತೀಚಿನ ವರ್ಷದಲ್ಲಿ ಪಾಶ್ಚಾತ್ಯ ನೃತ್ಯಗಳ ಪ್ರಭಾವದಿಂದ ನೇಪಥ್ಯಕ್ಕೆ ಸರಿಯುವ ಅಪಾಯ ಎದುರಾಗಿದ್ದು, ಉಳಿಸಿ ಬೆಳೆಸುವ ದಿಸೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಇಲ್ಲಿನ ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವೀರೇಂದ್ರ ತಿಳಿಸಿದರು.ಪಟ್ಟಣದ ನೂಪುರ ಭರತನಾಟ್ಯ ಕಲಾ ಕೇಂದ್ರದ ವತಿಯಿಂದ ದೊಡ್ಡಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಗುರು ನಮನ ಹಾಗೂ ತೃತೀಯ ವರ್ಷದ ಭರತನಾಟ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭರತ ಮುನಿಗಳಿಂದ ಸೃಷ್ಟಿಯಾದ ಭರತನಾಟ್ಯ ಪುರಾತನ ಸಾಂಪ್ರದಾಯಿಕ, ಪಾರಂಪರಿಕ ಕಲೆಗಳಲ್ಲಿ ಅತ್ಯಂತ ಶ್ರೇಷ್ಠವಾಗಿದ್ದು, ದೇವಾನುದೇವತೆಗಳು ಭರತನಾಟ್ಯ ಕಲೆಗೆ ಮಾರುಹೋದ ಹಲವು ಸಾಕ್ಷ್ಯ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿದೆ ಎಂದ ಅವರು, ದೇಶದ ಇತಿಹಾಸ ಸಂಸ್ಕೃತಿಯನ್ನು ಬಿಂಬಿಸುವ ಪುರಾತನ ನೃತ್ಯ ಪ್ರಕಾರವಾದ ಭರತನಾಟ್ಯ ಇತ್ತೀಚಿನ ವರ್ಷದಲ್ಲಿ ಪಾಶ್ಯಾತ್ಯ ಸಂಗೀತ, ನೃತ್ಯದ ಪ್ರಭಾವದಿಂದ ನೇಪಥ್ಯಕ್ಕೆ ಸರಿಯುವ ಅಪಾಯ ಎದುರಾಗಿದೆ. ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬ ಪೋಷಕರು ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ನೇತ್ರಾವತಿ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡಲ್ಲಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿ ಕಲೆ ಸಾಹಿತ್ಯ ನಾಟಕ ನೃತ್ಯದಿಂದ ಮಕ್ಕಳ ಮನಸ್ಸು ವಿಕಸನಗೊಳ್ಳಲಿದೆ ಎಂದು ತಿಳಿಸಿದರು.
ಭರತನಾಟ್ಯ ದಕ್ಷಿಣ ಭಾರತದ ನಾಟ್ಯ ಪ್ರಕಾರದಲ್ಲಿ ಅತ್ಯಂತ ಪ್ರಮುಖವಾಗಿದ್ದು, ತಮಿಳುನಾಡಿನ ಮೂಲಕ ದಕ್ಷಿಣದ ರಾಜ್ಯದಿಂದ ಉತ್ತರ ಭಾರತದ ಮೂಲಕ ದೇಶಾದ್ಯಂತ ವ್ಯಾಪಿಸಿದೆ. ಭಾರತೀಯ ನೃತ್ಯ ಪ್ರಕಾರದ ಶ್ರೇಷ್ಠತೆಯ ಪ್ರತೀಕವಾಗಿರುವ ಭರತನಾಟ್ಯ ಪುರಾತನ ಎಲ್ಲ ಪ್ರಸಿದ್ಧ ಗ್ರಂಥಗಳಲ್ಲಿ ಉಲ್ಲೇಖವಾಗಿದ್ದು, ದೇವಾನುದೇವತೆಗಳು, ರಾಜ ಮಹಾರಾಜರು ಭರತನಾಟ್ಯದ ನೃತ್ಯಕ್ಕೆ ಮಾರುಹೋದ ಹಲವು ನಿದರ್ಶನವಿದೆ. ಇಂತಹ ಶ್ರೇಚ್ಠ ನೃತ್ಯ ಪ್ರಕಾರದ ಮೂಲಕ ಸಂಸ್ಕೃತಿ ಸಂಸ್ಕಾರ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸುವಂತೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂಪುರ ಭರತನಾಟ್ಯ ಕಲಾ ಕೇಂದ್ರದ ಪ್ರಾಚಾರ್ಯರಾದ ವಿದುಷಿ ಕು.ಚೈತನ್ಯ ಎನ್. ಮಾತನಾಡಿ, ಭರತನಾಟ್ಯ ಕಲಾ ಕೇಂದ್ರ ಪಟ್ಟಣದಲ್ಲಿ ಆರಂಭವಾಗಿ ಕೇವಲ 6 ವರ್ಷದಲ್ಲಿಯೇ ಅತ್ಯುತ್ತಮ ಸಾಧನೆ ಮೂಲಕ ಗುರುತಿಸಿಕೊಂಡಿದೆ ಕಲಾ ಕೇಂದ್ರದ ಕೊರತೆಯಿಂದಾಗಿ ಶಿಕ್ಷಣಾರ್ಥಿಗಳು ವಂಚಿತರಾಗಿದ್ದು, ಕೊರತೆಯನ್ನು ನೂಪುರ ಕಲಾ ಕೇಂದ್ರ ಹೋಗಲಾಡಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣ್ಯರ ಸಹಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.ಸಂಗೀತಾ ಹಾಗೂ ಗೀತಾ ಅತಿಥಿಗಳನ್ನು ಪರಿಚಯಿಸಿದರು. ಕೋಮಲ ಸಂಗಡಿಗರು ಪ್ರಾರ್ಥಿಸಿ,ಮಹೇಶ್ವರಿ ಸ್ವಾಗತಿಸಿ, ಪ್ರತಿಭಾ ನಿರೂಪಿಸಿ ವಿಶಾಲಾಕ್ಷಿ ವಂದಿಸಿದರು.