ಹಾವೇರಿ ಸಮೀಪದ ದೇವಿಹೊಸೂರಿನಲ್ಲಿರುವ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯಲ್ಲಿ ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆ ಹೆಚ್ಚಿಸಲು ಹಾಗೂ ಕಾಪಾಡಲು ಪ್ಯಾಕಿಂಗ್ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಇತ್ತೀಚಿನ ತಾಂತ್ರಿಕ ಪ್ರಗತಿ ಕುರಿತು ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ಹಾವೇರಿ: ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಸಂಬಾರು ಪದಾರ್ಥಗಳು ಬಹಳಷ್ಟು ಪ್ರಾಮುಖ್ಯ ಪಡೆದಿದ್ದು, ವಿದೇಶಗಳಲ್ಲೂ ನಮ್ಮ ದೇಶದ ಸಂಬಾರು ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಎಸ್. ಜಂಗಮಶೆಟ್ಟಿ ಹೇಳಿದರು.ಸಮೀಪದ ದೇವಿಹೊಸೂರಿನಲ್ಲಿರುವ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯಲ್ಲಿ ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಹಾಗೂ ಕಾಪಾಡಲು ಪ್ಯಾಕಿಂಗ್ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಇತ್ತೀಚಿನ ತಾಂತ್ರಿಕ ಪ್ರಗತಿ ಕುರಿತು ಐಸಿಎಆರ್ ಪ್ರಾಯೋಜಕತ್ವದಲ್ಲಿ 10 ದಿನಗಳ ಕಾಲ ಆಯೋಜಿಸಿರುವ ತರಬೇತಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಕಾಳುಮೆಣಸು ಹಾಕಿ `ಬಿಸುವಕಲ್ಲನ್ನು'''''''' ತಿರುಗಿಸುವ ಮೂಲಕ ಇತ್ತೀಚೆಗೆ ಉದ್ಘಾಟಿಸಿ ಆಹಾರ ಮತ್ತು ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಡೀನ್ ಡಾ. ಲಕ್ಷ್ಮಣ ಕುಕನೂರ ಮಾತನಾಡಿ, 200 ವರ್ಷಗಳ ಹಿಂದೆ ನಮ್ಮ ದೇಶದ ಮೇಲೆ ಸಂಬಾರು ಪದಾರ್ಥಗಳ ವ್ಯಾಪಾರಕ್ಕಾಗಿ ವಿದೇಶಿಗರು ಬಂದಿದ್ದರು. ಅಲ್ಲದೇ ವಿದೇಶಿಗರು ನಮ್ಮ ದೇಶವನ್ನು ಸಹ ಆಳಿದರು. ಪ್ರಸ್ತುತ ನಮ್ಮ ದೇಶದ ಆರ್ಥಿಕ ಪ್ರಗತಿಯಲ್ಲಿ ಸಂಬಾರು ಪದಾರ್ಥಗಳ ರಫ್ತು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.ತರಬೇತಿ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ನಮ್ಮ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ 17 ಶಿಕ್ಷಕರು, ವಿಜ್ಞಾನಿಗಳು ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಸುಷ್ಮಾ ಐ.ಎಚ್. ಸ್ವಾಗತಿಸಿದರು.ಸಹ ಪ್ರಾಧ್ಯಾಪಕಿ ಡಾ. ವೀಣಾ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀನಿವಾಸ ಜಿ. ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣಾ ನೀರಲಗಿ ವಂದಿಸಿದರು.